ಕುಡುಮಲ್ಲಿಗೆ ಗ್ರಾಪಂನಲ್ಲಿ ನಡೆದಿರುವ ಬಾವಿ ಹಗರಣದ ಬಗ್ಗೆ ವಿವರಣೆ ಪಡೆಯುತ್ತಿರುವ ಸಾರ್ವಜನಿಕ ಲೆಕ್ಕಪರಿಶೋದನಾ ಸಮಿತಿಯ ಅಧಿಕಾರಿಗಳು.
ತೀರ್ಥಹಳ್ಳಿ: ಕುಡಿಯುವ ನೀರಿನ ಬಾವಿಯನ್ನು ನಿರ್ಮಿಸದೆ ಬಿಲ್ ಪಾವತಿಯಾದ ಪ್ರಕರಣವೊಂದು ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದು, ನಾಲ್ಕು ವರ್ಷಗಳ ನಂತರ ಬೆಳಕಿಗೆ ಬಂದಿದೆ. ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ವ್ಯಂಗ್ಯಭರಿತವಾಗಿ ಕುಡುಮಲ್ಲಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕುಡುಮಲ್ಲಿಗೆಯ ಶ್ರೀ ಸತ್ಯಸಾರಮಾನಿ ಧರ್ಮದೈವ ಹಾಗೂ ಆತೀರ ಪಂಜುರ್ಲಿ ದೇವಸ್ಥಾನದ ಬಳಿ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕಾಗಿ ತಾಲೂಕು ಪಂಚಾಯಿತಿ ಅನುದಾನದಲ್ಲಿ 1.24 ಲಕ್ಷ ರೂ. ಮಂಜೂರಾಗಿತ್ತು. ಕಾಮಗಾರಿ ಸ್ಥಳಕ್ಕೆ 30 ರಿಂಗ್‌ಗಳನ್ನು ತಂದಿಟ್ಟು, ಬೇರೊಂದು ಜಾಗದಲ್ಲಿ ನಿರ್ಮಿಸಲಾಗಿದ್ದ ಬಾವಿಯ ಫೋಟೋ ಲಗತ್ತಿಸಿ ಹಣವನ್ನು ಡ್ರಾ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.
2021-22ರಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಭೆಕ್ಷೆ ಗ್ರಾಮದ ಧಾರ್ಮಿಕ ಕೇಂದ್ರದ ಬಳಿ ಬಾವಿ ನಿರ್ಮಿಸಲು ಮಂಜೂರಾಗಿದ್ದ ಹಣ ದುರ್ಬಳಕೆ ಆಗಿರುವ ಬಗ್ಗೆ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿ ತನಿಖೆಯಿಂದ ನಾಲ್ಕು ವರ್ಷದ ನಂತರ ಬೆಳಕಿಗೆ ಬಂದಿದೆ. ಈ ಕಾಮಗಾರಿಗಾಗಿ ತಂದಿದ್ದ 30 ರಿಂಗ್‌ಗಳು ಸ್ಥಳದಲ್ಲಿ ಬಿದ್ದಿದ್ದು, ಅವುಗಳು ಕೂಡಾ ಶಿಥಿಲವಾಗಿವೆ. ಇದು ಗ್ರಾಮಸ್ಥರ ಆಕ್ಷೇಪಕ್ಕೆ ಕಾರಣವಾಗಿದೆ.
ಅಕ್ರಮದಲ್ಲಿ ಗುತ್ತಿಗೆದಾರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಹಾಗೂ ಬಾವಿ ನಿರ್ಮಾಣವಾಗಿರುವ ಬಗ್ಗೆ ಧೃಡೀಕರಣ ಪತ್ರ ನೀಡಿರುವ ಕುಡುಮಲ್ಲಿಗೆ ಅಂದಿನ ಪಿಡಿಒ ಶಾಮೀಲಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.