ರಿಪ್ಪನ್‌ಪೇಟೆ ಸಮೀಪದ ಶಾಖವಳ್ಳಿ ಗ್ರಾಮದ ಸುಮಾ ಅವರ ಮಗುವಿನ ಆರೈಕೆಗಾಗಿ ಪಿಎಸ್‌ಐ ರಾಜು ರೆಡ್ಡಿ ಅವರ ಮೂಲಕ ಕಾರ್ಮಿಕರ ಸಂಘದಿಂದ ಧನ ಸಹಾಯ ನೀಡಲಾಯಿತು. ಸುಂದರ್ ಬಾಬು, ಸಂಜಯಕುಮಾರ್, ಮಹಮ್ಮದ್ ಹುಸೇನ್ ಇತರರಿದ್ದರು.
ರಿಪ್ಪನ್‌ಪೇಟೆ: ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಕಾರ್ಮಿಕರ ಸಂಘಟನೆ ಮಾಡುವ ಜತೆಗೆ ಸಮಾಜಮುಖಿ ಕಾರ್ಯದಲ್ಲಿಯೂ ತೊಡಗಿಕೊಂಡಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಯೋಗಕ್ಷೇಮ ಹಾಗೂ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ ಎಂದರು.
ಅನಾರೋಗ್ಯ ಪೀಡಿತ ಕಾರ್ಮಿಕರ ಕುಟುಂಬದವರಿಗೆ ನೆರವು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಾಯ, ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಮತ್ತಿತರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ಕಾರ್ಮಿಕರು ಧೃತಿಗೆಡುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಸಂಘವನ್ನು ಮುನ್ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸವದ ಸಂದರ್ಭದಲ್ಲಿ ಸುಮಾ ಎಂಬುವರು ಮೃತಪಟ್ಟಿದ್ದು, ಅವರ ಮಗುವಿನ ಯೋಗಕ್ಷೇಮಕ್ಕಾಗಿ ಸಂಘದಿಂದ ಧನ ಸಹಾಯ ನೀಡಲಾಯಿತು. ಸಂಘದ ಜಿಲ್ಲಾಧ್ಯಕ್ಷ ಸಂಜಯಕುಮಾರ್, ತಾಲೂಕು ಅಧ್ಯಕ್ಷ ಮಹಮ್ಮದ್ ಹುಸೇನ್, ಶಂಕ್ರಾಚಾರ್, ರಾಘವೇಂದ್ರ, ಪ್ರಭಾಕರಾಚಾರ್ಯ, ಕೃಷ್ಣಪ್ಪ ಇತರರಿದ್ದರು.