ಭದ್ರಾವತಿಯ ಕೆಎಸ್ಆರ್ಟಿಸಿ ಮುಖ್ಯಬಸ್ ನಿಲ್ದಾಣದಿಂದ ಕಡದಕಟ್ಟೆವರೆಗಿನ ರಸ್ತೆಯ ಡಿವೈಡರ್ ಮಧ್ಯಭಾಗದಲ್ಲಿ ಹೊರಚಾಚಿರುವ ಪಿಲ್ಲರ್ಗಳು
- ಬೀದಿದೀಪ ಕಾಮಗಾರಿ ಅವೈಜ್ಞಾನಿಕ
- ಅಪಘಾತಕ್ಕೆ ಕಾರಣವಾಗುತ್ತಿರುವ ಪಿಲ್ಲರ್ಗಳು
- 90 ಲ ರೂ. ವೆಚ್ಚದ ಕಾಮಗಾರಿ
ಭದ್ರಾವತಿ: ರಸ್ತೆಗಳಿಗೆ ಅಲಂಕಾರಿಕ ಬೀದಿದೀಪ ಅಳವಡಿಸುವ ಕಾಮಗಾರಿ ಬಗ್ಗೆಯೇ ಜನತೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಕಾಮಗಾರಿಗೆ ಒಪ್ಪಿಗೆ ಸೂಚಿಸಿದ ಇಂಜಿನಿಯರ್ ನಡೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ನಡುವೆಯೇ ಕಾರು ಅಪಘಾತಕ್ಕೆ ಈಡಾಗಿರುವುದರಿಂದ ಕಾಮಗಾರಿ ಅವೈಜ್ಞಾನಿಕ ಎಂದು ಜನತೆ ವಿರೋಧಿಸುತ್ತಿದ್ದಾರೆ.
ಭದ್ರಾವತಿಯನ್ನು ಸುಂದರ ನಗರವನ್ನಾಗಿಸುವ ಪಣತೊಟ್ಟಿರುವ ಸ್ಥಳಿಯ ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಹಲವೆಡೆ ರಸ್ತೆ ಅಭಿವೃದ್ಧಿಗೊಳಿಸಿದ್ದಾರೆ. ಬಿ.ಎಚ್.ರಸ್ತೆಯ ಎರಡೂ ಬದಿಯಲ್ಲಿ ುಟ್ಪಾಥ್ ಮಾಡಿದ್ದಾರೆ. ಅದಕ್ಕೆ ಹೊಂದಿಕೊಂಡಂತೆ ಪಾದಚಾರಿಗಳಿಗೆ ಅನುಕೂಲವಾಗುವಂತೆ ಗ್ರೀಲ್ಗಳನ್ನೂ ಅಳವಡಿಸಿದ್ದಾರೆ. ಕೆಲವೆಡೆ ಸೈಕಲ್ಪಾಥ್ ಸಹ ಮಾಡಿದ್ದಾರೆ.
ಇದೀಗ 90 ಲಕ್ಷ ರೂ. ವೆಚ್ಚದಲ್ಲಿ ನಗರದ ಕೆಎಸ್ಆರ್ಟಿಸಿ ಮುಖ್ಯ ಬಸ್ನಿಲ್ದಾಣದಿಂದ ಶಿವಮೊಗ್ಗ ಕಡೆಗೆ ಹಾದುಹೋಗುವ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿವರೆಗೆ ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ಗಳ ನಡುವೆ ಬೀದಿದೀಪಗಳನ್ನು ಅಳವಡಿಸಲು ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಡಿವೈಡರ್ಗಳ ಮಧ್ಯಭಾಗದಲ್ಲಿ ವಿದ್ಯುತ್ ಪೋಲ್ಗಳನ್ನು ನಿಲ್ಲಿಸಲು ಅಲ್ಲಲ್ಲಿ ಕಾಂಕ್ರೀಟ್ ಪಿಲ್ಲರ್ಗಳನ್ನು ಹಾಕಲಾಗಿದೆ. ಈ ಪಿಲ್ಲರ್ಗಳು ರಸ್ತೆ ಡಿವೈಡರ್ ಗೋಡೆಗೆ ಸಮನಾಗಿರಬೇಕಾಗಿತ್ತು. ಆದರೆ ಪಿಲ್ಲರ್ಗಳು ಎರಡೆರಡು ಅಡಿಗಳಷ್ಟು ರಸ್ತೆಗೆ ಚಾಚಿಕೊಂಡಿವೆ. ಇದರಿಂದ ಡಿವೈಡರ್ ಬದಿಯಲ್ಲಿ ಸಂಚರಿಸುವ ವಾಹನಗಳು ಕಾಂಕ್ರೀಟ್ ಪಿಲ್ಲರ್ಗಳಿಗೆ ಡಿಕ್ಕಿ ಹೊಡೆಯುವ ಮೂಲಕ ಅಪಘಾತಕ್ಕೀಡಾಗುತ್ತಿವೆ. ಇದರಿಂದ ಸಾವು&ನೋವು ಸಂಭವಿಸುವ ಸಾಧ್ಯತೆಗಳಿವೆ. ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹೋರಾಟಗಾರರು, ಜನರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಏ.24ರಂದು ಕಾರೊಂದು ಸಂಜೆ ವೇಳೆ ಜೋರಾಗಿ ಬರುವಾಗ ಇದೇ ಡಿವೈಡರ್ನ ಕಾಂಕ್ರೀಟ್ ಪಿಲ್ಲರ್ಗಳಿಗೆ ತಾಗಿದ್ದರಿಂದ ಅಪಘಾತ ಸಂಭವಿಸಿ ಕಾರಿನ ಮುಂಭಾಗ ಜಖಂಗೊಂಡಿತ್ತು. ಅಪಘಾತ ತಡೆಯುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ರಸ್ತೆಗೆ ಚಾಚಿಕೊಂಡಿರುವ ಕಾಂಕ್ರಿಟ್ ಪಿಲ್ಲರ್ಗಳ ಸಮನಾಂತರವಾಗಿ ರೆಡಿಯಂ ಟೇಪ್ ಅಥವಾ ಬ್ಯಾರಿಕೇಡ್ ನಿಲ್ಲಿಸುವುದು ಸೂಕ್ತ ಎಂಬುದು ಜನರ ಒತ್ತಾಯ.
ಡಿವೈಡರ್ಗಳಿಗೆ ಹೊಂದಿಕೊಂಡಿರುವ ಕಾಂಕ್ರೀಟ್ ಪಿಲ್ಲರ್ಗಳು ಅವೈಜ್ಞಾನಿಕವಾಗಿ ಇರುವುದು ಕಾಣುತ್ತಿದ್ದರೂ ಅದನ್ನು ಒಪ್ಪಿಕೊಳ್ಳದ ನಗರಸಭೆ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿರುವುದೇ ಆಶ್ಚರ್ಯ ತರಿಸಿದೆ. ಅಲಂಕಾರಿಕ ಬೀದಿ ದೀಪ ಅಳವಡಿಕೆ ಕಾಮಗಾರಿ ಆರಂಭವಾಗಿದೆಯಷ್ಟೇ. ಕಾಮಗಾರಿ ಪ್ರಗತಿಯಲ್ಲಿ ಇರುವಾಗ ವಾಹನ ಚಾಲಕರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ರಸ್ತೆ ಮಧ್ಯಭಾಗದ ಡಿವೈಡರ್ ಗೋಡೆಯಿಂದ ಕಾಂಕ್ರೀಟ್ ಪಿಲ್ಲರ್ಗಳು 6 ಇಂಚಿನಷ್ಟು ಹೊರ ಬಂದಿವೆ. ಆ 6 ಇಂಚಿನ ಅಗಲಕ್ಕೆ ನೇರವಾಗಿ ಒಂದು ಪಿಲ್ಲರ್ನಿಂದ ಇನ್ನೊಂದು ಪಿಲ್ಲರ್ಗೆ ರಸ್ತೆ ಡಿವೈಡರ್ನ (ಎಡ ಹಾಗೂ ಬಲ) ಎರಡೂ ಭಾಗದಲ್ಲಿ ಗೋಡೆ ನಿರ್ಮಿಸಲಾಗುವುದು. ಬಾಕ್ಸ್ ಮಾದರಿ ಮಾಡಿ ಅದರೊಳಗೆ ಅಲಂಕಾರಿಕ ಹೂವಿನ ಗಿಡಗಳನ್ನು ನೆಟ್ಟು ಕಾಮಗಾರಿ ಮುಗಿಸುತ್ತೇವೆ. ಇದು ಜನರಿಗೆ ತಿಳಿಯದ ಕಾರಣ ಕಾಮಗಾರಿ ಅವೈಜ್ಞಾನಿಕ ಎನ್ನುತ್ತಾರೆ. 6 ಅಡಿಯಷ್ಟು ಮಾತ್ರ ರಸ್ತೆ ಅಗಲ ಕಡಿಮೆಯಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ರಸ್ತೆ ಡಿವೈಡರ್ಗಳಿಗೆ ಹೊಂದಿಕೊಂಡಂತೆ ಹಾಕಲಾಗಿರುವ ಕಾಂಕ್ರೀಟ್ ಪಿಲ್ಲರ್ಗಳು ಡಿವೈಡರ್ನಿಂದ ಹೊರಚಾಚಿರುವುದು ನಿಜ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಡಿವೈಡರ್ಗಳ ಎರಡೂ ಕಡೆ 6 ಇಂಚಿನಷ್ಟು ವಾಲ್ ನಿರ್ಮಿಸಲಾಗುವುದು. ಎರಡೂ ಬದಿಯಲ್ಲಿ 6 ಇಂಚಿನಷ್ಟು ಮಾತ್ರ ರಸ್ತೆ ಕಿರಿದಾಗುತ್ತದೆ. ಏಕಮುಖ ಸಂಚಾರ ಇರುವುದರಿಂದ ಯಾವುದೇ ಸಮಸ್ಯೆ ಆಗದು.
> ಶಿವಪ್ರಕಾಶ್, ನಗರಸಭೆ ಅಭಿಯಂತ
ರಸ್ತೆ ಡಿವೈಡರ್ ಮಧ್ಯ ಭಾಗಗಳಲ್ಲಿ ಹಾಕಲಾಗಿರುವ ಕಾಂಕ್ರೀಟ್ ಪಿಲ್ಲರ್ಗಳು ಡಿವೈಡರ್ಗೆ ಸಮನಾಗಿರದೆ ರಸ್ತೆಗೆ ಹೊರಚಾಚಿವೆ. ಹೊರಚಾಚಿರುವ ಸಿಮೆಂಟ್ ಪಿಲ್ಲರ್ಗಳು ಚಾಲಕರಿಗೆ ಕೆಲವೊಮ್ಮೆ ಕಾಣುವುದಿಲ್ಲ. ಆಗ ಅಪಘಾತವಾಗುತ್ತದೆ. ಕಾಮಗಾರಿ ಮುಗಿಯುವವರೆಗೂ ಎರಡೂ ಬದಿಯಲ್ಲಿ ಬ್ಯಾರಿಕೇಡ್ ನಿಲ್ಲಿಸಲಿ.
ಕಾರು ಅಪಘಾತವಾಗುವ ಮುಂಚೆ ಕಾಮಗಾರಿ ನಡೆಯುವಾಗಲೇ ನಗರಸಭೆ ಆಯುಕ್ತರು ಹಾಗೂ ಇಂಜಿನಿಯರ್ ಗಮನಕ್ಕೆ ತಂದು ಅವೈಜ್ಞಾನಿಕ ಕಾಮಗಾರಿ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
> ತೀರ್ಥೇಶ್, ಸಾಮಾಜಿಕ ಹೋರಾಟಗಾರ