ಶಿವಮೊಗ್ಗ ವಿಮಾನ ನಿಲ್ದಾಣ 
ಶಿವಮೊಗ್ಗ

ನೈಟ್ ಲ್ಯಾಂಡಿಂಗ್‌ಗೆ ಕೂಡಿಬಂದ ಕಾಲ I night landing

ಪ್ರಮುಖ ಮುಖ್ಯಾಂಶಗಳು

  • ಉಪಕರಣ ಅಳವಡಿಕೆಗೆ ಗ್ರೀನ್ ಸಿಗ್ನಲ್
  • 3 ವರ್ಷಗಳ ಬಳಿಕ ಬಗೆಹರಿದ ಸಮಸ್ಯೆ
  • ಅಂತಾರಾಷ್ಟ್ರೀಯ ಗುಣಮಟ್ಟದತ್ತ ವಿಮಾನ ನಿಲ್ದಾಣ
ಶಿವಮೊಗ್ಗ: ಮೂರು ವರ್ಷಗಳ ಬಳಿಕ ಶಿವಮೊಗ್ಗ ಏರ್‌ಪೋರ್ಟ್ (airport) ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ (aeroplane) ನಿಲ್ದಾಣವಾಗುವತ್ತ ಹೆಜ್ಜೆ ಹಾಕುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ನೈಟ್ ಲ್ಯಾಂಡಿಂಗ್ (night landing) ವ್ಯವಸ್ಥೆ ಅಳವಡಿಕೆಗೆ ಅಂತೂ ವೇದಿಕೆ ಸಿದ್ಧವಾಗಿದೆ.
ವಿಮಾನಗಳು ರಾತ್ರಿ ವೇಳೆ, ಪ್ರತಿಕೂಲ ಹವಾಮಾನದಲ್ಲೂ ಕಾರ್ಯಾಚರಣೆ ಮಾಡಲು ಅನುಕೂಲವಾಗುವಂತೆ ವಿಒಆರ್(ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್) ಹಾಗೂ ಡಿಎಂಇ(ಡೈರೆಕ್ಷನ್ ಮೆಷರ್‌ಮೆಂಟ್ ಎಕ್ವಿಪ್‌ಮೆಂಟ್) ಉಪಕರಣಗಳ ಅಳವಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದಕ್ಕೆ ಸಂಬಂಧಿಸಿ ರನ್‌ವೇ ಸಮೀಪದ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ಕಟ್ಟಡದ ಬಳಿಯ ಮಣ್ಣನ್ನು ಪರೀಕ್ಷೆಗೆ ಕಳುಹಿಸಿದ್ದು, ಉಪಕರಣ ಅಳವಡಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವರದಿ ಬಂದಿದೆ.
ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಈ ಸಂಗತಿಯನ್ನು ದೃಢಪಡಿಸಿದ್ದು ಈಗಾಗಲೇ ವಿಒಆರ್ ಉಪಕರಣದ ಅಳವಡಿಕೆ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಆರು ತಿಂಗಳಲ್ಲಿ ಉಪಕರಣಗಳ ಅಳವಡಿಕೆ ಪೂರ್ಣಗೊಂಡು ಹೊಸ ವ್ಯವಸ್ಥೆ ಏರ್‌ಪೋರ್ಟ್‌ಗೆ ಸೇರ್ಪಡೆಯಾಗಲಿದೆ.
ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣವಾಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ಆರಂಭವಾದರೆ ನೆರೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮನಾಗಿ ಈ ಏರ್‌ಪೋರ್ಟ್ ಕೆಲಸ ಮಾಡಲಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೂ ಇದು ಪೂರಕವಾಗಲಿದೆ. ಮೇಲಾಗಿ ಮಂಗಳೂರಿನ ಟೇಬಲ್ ಟಾಪ್ ಏರ್‌ಪೋರ್ಟ್‌ಗಿಂತ ಶಿವಮೊಗ್ಗ ವಿಮಾನ ನಿಲ್ದಾಣ ಅತ್ಯಂತ ಸುರಕ್ಷಿತ ಎಂಬುದು ಗಮನಾರ್ಹ.

12.50 ಕೋಟಿ ರೂ. ಮಂಜೂರು

ಉಪಕರಣಗಳ ಖರೀದಿಗೆ 7 ಕೋಟಿ ರೂ. ಹಾಗೂ ಅವುಗಳನ್ನು ಅಳವಡಿಸಲು ಕಟ್ಟಡ ನಿರ್ಮಾಣಕ್ಕೆ 5.50 ಕೋಟಿ ರೂ. ಮಂಜೂರಾಗಿದೆ. 5.50 ಕೋಟಿ ರೂ.ನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕೆಲಸಗಳು ಪೂರ್ಣಗೊಳ್ಳಲಿವೆ. ಎಟಿಸಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡದ ಸಮೀಪವೇ ಕಡಿಮೆ ಎತ್ತರದಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಗುತ್ತದೆ. ಈ ಕಟ್ಟಡದೊಳಗೆ ಸರ್ವರ್ ಮತ್ತಿತರ ಪೂರಕ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಕಟ್ಟಡದ ಮೇಲ್ಭಾಗದಲ್ಲಿ ವಿಒಆರ್ ಹಾಗೂ ಹಾಗೂ ಡಿಎಂಇ ಉಪಕರಣಗಳನ್ನು ಇರಿಸಲಾಗುತ್ತದೆ.

ಉಪಕರಣದ ಕೆಲಸ ಹೇಗೆ?

ಇದುವರೆಗೆ ನೈಟ್‌ಲ್ಯಾಂಡಿಂಗ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಆದರೆ ಈಗ ಈ ವ್ಯವಸ್ಥೆಗೆ ಬಳಕೆಯಾಗುವ ಉಪಕರಣಗಳು ಹೇಗೆ ಕೆಲಸ ಮಾಡಲಿವೆ? ಎಂಬ ಕುತೂಹಲ ಹಲವರಲ್ಲಿದೆ. ವೆರಿ ಹೈ ಫ್ರೀಕ್ವೆನ್ಸಿ ಒಮ್ನಿ ರೇಂಜ್ ಉಪಕರಣವು ವಿಮಾನಕ್ಕೆ ಏರ್‌ಪೋರ್ಟ್‌ನ ದಿಕ್ಕನ್ನು ಸ್ಪಷ್ಟವಾಗಿ ತೋರಿಸಲಿದೆ. ಒಮ್ಮೆ ವಿಮಾನ ಶಿವಮೊಗ್ಗದ ವಿಒಆರ್ ಜತೆ ಸಂಪರ್ಕ ಸಾಧಿಸಿದರೆ ಅದು ಸ್ಪಷ್ಟ ದಿಕ್ಕಿನಲ್ಲಿ ಇಲ್ಲಿಗೆ ಬರುವುದು ಸಾಧ್ಯವಾಗಲಿದೆ. ಡಿಎಂಇ(ಡೈರೆಕ್ಷನ್ ಮೆಷರ್‌ಮೆಂಟ್ ಎಕ್ವಿಪ್‌ಮೆಂಟ್) ವಿಮಾನ ಹಾರಾಟ ಮಾಡುತ್ತಿರುವ ಸ್ಥಳದಿಂದ ಶಿವಮೊಗ್ಗ ಏರ್‌ಪೋರ್ಟ್‌ಗಿರುವ ದೂರವನ್ನು ಎಟಿಸಿ ಮೂಲಕ ಕಾಕ್‌ಪಿಟ್‌ಗೆ ರವಾನಿಸಲಿದೆ. ಇದರಲ್ಲಿ ಅಳವಡಿಸಿರುವ ರಾಡಾರ್ ಎಂಥದ್ದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ನೋಡಿಕೊಳ್ಳಲಿದೆ. ಒಂದು ವೇಳೆ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಪೈಲೆಟ್ ಏನೂ ಮಾಡಲಾಗದೆ ವಿಮಾನವನ್ನು ಆಟೋ ಪೈಲೆಟ್ ವ್ಯವಸ್ಥೆಗೆ ಹಾಕಿದರೂ ಡಿಎಂಇ ಹಾಗೂ ವಿಒಆರ್ ಆ ವಿಮಾನದ ಸುರಕ್ಷಿತ ಆಗಮನಕ್ಕೆ ಸೂಕ್ತವಾದ ಸಂದೇಶ ರವಾನಿಸಲಿವೆ. ರಾತ್ರಿ ವೇಳೆ ಮಾತ್ರವಲ್ಲದೆ ಕೆಲವೊಮ್ಮೆ ಹಗಲಿನಲ್ಲೂ ಮಂಜು ಕವಿದ ವಾತಾವರಣ, ಮಳೆ, ಬಿರುಗಾಳಿ ಮುಂತಾದ ಸಂದರ್ಭದಲ್ಲೂ ಪೈಲೆಟ್‌ಗೆ ರನ್‌ವೇ ನಿಖರವಾಗಿ ಕಾಣುವುದಿಲ್ಲ. ಅಂತಹ ಸಂದರ್ಭದಲ್ಲಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗದೆ ಮರಳಿದ ಅನೇಕ ನಿದರ್ಶನಗಳಿವೆ. ನೈಟ್ ಲ್ಯಾಂಡಿಂಗ್ ಉಪಕರಣದ ಅಳವಡಿಕೆಯಿಂದ ಇದಕ್ಕೆ ಪರಿಹಾರ ಸಿಗಲಿದೆ.

ಹೆಚ್ಚಲಿದೆ ವಿಮಾನ ದಟ್ಟಣೆ

ವಿಒಆರ್ ಹಾಗೂ ಡಿಎಂಇ ಉಪಕರಣಗಳ ಅಳವಡಿಕೆಯಿಂದ ರಾತ್ರಿ ವೇಳೆ ವಿಮಾನ ಕಾರ್ಯಾಚರಣೆ ಸಾಧ್ಯವಾಗುವುದರಿಂದ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನ ಸಂಚಾರ ಹೆಚ್ಚಲಿದೆ. ಸಾರ್ವಜನಿಕರನ್ನು ಕರೆದೊಯ್ಯುವ ವಿಮಾನಗಳು ಆರಂಭವಾಗುವುದು ವಿಳಂಬವಾಗಬಹುದು. ಆದರೆ ಅತಿ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳನ್ನು ಕರೆತರುವ ವಿಮಾನಗಳ ಸಂಚಾರ ಹೆಚ್ಚಬಹುದು. ಮಧ್ಯ ಕರ್ನಾಟಕದ ಏಕೈಕ ಏರ್‌ಪೋರ್ಟ್ ಇದಾಗಿರುವುದರಿಂದ ಚುನಾವಣೆ ಹಾಗೂ ತುರ್ತು ಸಂದರ್ಭದಲ್ಲಿ ಇದರ ಬಳಕೆ ಹೆಚ್ಚಲಿದೆ. ಖಾಸಗಿ ವಿಮಾನಗಳು ಈ ಏರ್‌ಪೋರ್ಟ್ ಬಳಸಿಕೊಳ್ಳುವ ಅವಕಾಶಗಳು ಹೆಚ್ಚಲಿವೆ. ಆರಂಭವಾದ ಮೂರು ವರ್ಷಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಈ ಏರ್‌ಪೋರ್ಟ್‌ನಲ್ಲಿ ವಿಮಾನಗಳು ಕಾರ್ಯಾಚರಣೆ ಮಾಡಿಲ್ಲ. ಆದರೆ ಪ್ರಯಾಣಿಕರ ಕೊರತೆಯಿಂದ ಎಂದಿಗೂ ವಿಮಾನ ಸಂಚಾರ ಸ್ಥಗಿತವಾಗಿಲ್ಲ. ಈ ಕಾರಣದಿಂದ ವಿಒಆರ್ ಹಾಗೂ ಡಿಎಂಇ ಉಪಕರಣಗಳು ಏರ್‌ಪೋರ್ಟ್‌ಗೆ ಮತ್ತಷ್ಟು ಶಕ್ತಿ ತುಂಬಲಿವೆ.