ಸಾಗರದಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್‌ನ ವಾರ್ಷಿಕ ಪೂಜಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುದೇವೇಂದ್ರಕೀರ್ತಿ ಭಟ್ಟಾರಕ ಶ್ರೀ ಉದ್ಘಾಟಿಸಿದರು. ಎಂ.ಸುಂದರಪ್ರಭು, ಹಿತಕರ ಜೈನ್, ಎಂ.ಪಿ.ಲೋಕರಾಜ್ ಜೈನ್, ಚಂದ್ರಕಲಾ ಇತರರಿದ್ದರು.
ಸಾಗರ: ರಾಮಾಯಣ, ಮಹಾಭಾರತ ಯುದ್ಧ ಸಂದರ್ಭದಲ್ಲಿ ನಮ್ಮಲ್ಲಿ ವಿಮಾನ ಬಳಕೆಯಾಗಿತ್ತು ಎನ್ನುವುದನ್ನು ನಮಗೆ ಪುರಾಣ ತಿಳಿಸಿ ಕೊಡುತ್ತದೆ. ಐದು ಸಾವಿರ ವರ್ಷಗಳ ಹಿಂದಿನ ನಮ್ಮ ಪೂರ್ವಿಕರ ವೈಜ್ಞಾನಿಕ ಆಲೋಚನೆ ನಮ್ಮ ಊಹೆಗೂ ಮೀರಿದ್ದಾಗಿದೆ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ನಗರದ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಜೈನ ಸಮಾಜ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ 4ನೇ ವಾರ್ಷಿಕ ಪೂಜಾ ಮಹೋತ್ಸವ, ಧರ್ಮಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಒಂಬತ್ತು ಗ್ರಹಗಳಿವೆ ಎಂದು ಉಲ್ಲೇಖವಿದೆ. ಆದರೆ 80ಕ್ಕೂ ಹೆಚ್ಚು ಗ್ರಹಗಳು ನಭೋಮಂಡಲದಲ್ಲಿದ್ದು, ಒಂದೊಂದೇ ಹೊಸ ಗ್ರಹಗಳನ್ನು ನಮ್ಮ ವಿಜ್ಞಾನಿಗಳು ಶೋಧ ಮಾಡುತ್ತಿದ್ದಾರೆ. ಆದರೆ ಸಾವಿರಾರು ವರ್ಷಗಳ ಹಿಂದೆ ಯಾವುದೇ ತಾಂತ್ರಿಕತೆಯಿಲ್ಲದೆ 9 ಗ್ರಹಗಳನ್ನು ಪತ್ತೆಹಚ್ಚಿ ಅದನ್ನು ದಾಖಲಿಸಿದ ನಮ್ಮ ಋಷಿಮುನಿಗಳ ಬುದ್ಧಿ ಸಾಮರ್ಥ್ಯ ನಿಜಕ್ಕೂ ಅವಿಸ್ಮರಣೀಯ. ನಮ್ಮಲ್ಲಿನ ಅನೇಕ ಗ್ರಂಥಗಳು, ತಾಳೆಗರಿಗಳಲ್ಲಿ ವಿಶೇಷ ಮಾಹಿತಿ ದಾಖಲಾಗಿದೆ. ಅದನ್ನು ಓದಿ ಅರಿತುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಾರ್ಷಿಕೋತ್ಸವ ಮೂಲಕ ನಾವು ಮಾಡಿದ ಕಾರ್ಯಗಳನ್ನು ಪುನರ್ಮನನ ಮಾಡಿಕೊಳ್ಳಲು ಸಾಧ್ಯವಿದೆ. ಆದಿನಾಥ ಸ್ವಾಮಿ ಜಿನಮಂದಿರ ನಿರ್ಮಾಣವಾಗಿ ನಾಲ್ಕು ವರ್ಷಗಳಾಗಿವೆ. ಕಲ್ಲು, ಮಣ್ಣಿನಿಂದ ನಿರ್ಮಿಸಿದ ಮಂದಿರದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ನಾವೆಲ್ಲ ಪೂಜಿಸಿಕೊಂಡು ಬರುತ್ತಿದ್ದೇವೆ. ಇಂತಹ ವಾರ್ಷಿಕೋತ್ಸವದ ಮೂಲಕ ಸಮಾಜದ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.
ಜೈನ ಧರ್ಮ ಮತ್ತು ವಿಜ್ಞಾನ ವಿಷಯ ಕುರಿತು ಎಂ.ಸುಂದರಪ್ರಭು ಉಪನ್ಯಾಸ ನೀಡಿದರು. ವೈ.ಜೆ.ಪದ್ಮರಾಜ್ ಜೈನ್, ಹೊಯ್ಸಳ ಜೈನ್, ರಾಜಕುಮಾರ್ ಜೈನ್, ಎಸ್.ಆರ್.ನಾಗರಾಜ್ ಜೈನ್, ಗಜೇಂದ್ರ ಜೈನ್, ಅಶೋಕ ಕುಮಾರ್ ಇಂದ್ರ ದಂಪತಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು. ಎಂ.ಪಿ.ಲೋಕರಾಜ್ ಜೈನ್, ಚಂದ್ರಕಲಾ, ಕೆ.ಜೆ.ಪದ್ಮರಾಜ ಜೈನ್, ಸರೋಜಾ ಧರಣೇಂದ್ರ ಜೈನ್ ಇತರರಿದ್ದರು.