ಶಾರದಾ ವಿಲಾಸ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಪಟ್ಟಾಭಿರಾಮ್, ಮಧುಕರ್, ಎಂ.ಎಸ್.ಚಂದ್ರಶೇಖರ ಅವಧಾನಿ ಇದ್ದರು.
- ಅದ್ವೈತದಿಂದ ಶ್ರೇಷ್ಠ ಜ್ಞಾನ ಪ್ರಸಾರ
- ವಿಧುಶೇಖರ ಭಾರತೀ ಶ್ರೀ ಅಭಿಮತ
- ಮತ್ತೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಶಿವಮೊಗ್ಗ; ವೇದ, ಶಾಸ್ತ್ರಗಳು ನಮಗೆ ಶ್ರೇಷ್ಠ ವಿಚಾರಗಳು ಮತ್ತು ತತ್ವಗಳನ್ನು ತಿಳಿಸುತ್ತವೆ. ಯಾವ ಮಾರ್ಗ ಅನುಸರಿಸಬೇಕು ಎನ್ನುವುದನ್ನು ವೇದಗಳು (vedas) ಮಾರ್ಗದರ್ಶನ ಮಾಡುತ್ತವೆ ಎಂದು ಶೃಂಗೇರಿ (sringeri) ಶಾರದಾ ಪೀಠದ ಶ್ರೀ ವಿಧುಶೇಖರ (vidhushekara) ಭಾರತೀ ಸ್ವಾಮೀಜಿ ಹೇಳಿದರು.
ಮತ್ತೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಜಗದ್ಗುರು ಆದಿಶಂಕರರ ಪಾಂಡಿತ್ಯ ಉತ್ಕೃಷ್ಟವಾದುದು. ಆತ್ಮಸಾಕ್ಷಾತ್ಕಾರ ಮಾಡಿದ ಬಳಿಕ ಅವರು ನೀಡಿದ್ದು ಅದ್ವೈತ ಸಿದ್ಧಾಂತ. ಈ ಮೂಲಕ ದೊಡ್ಡ ಜ್ಞಾನವನ್ನು ಜಗತ್ತಿಗೆ ನೀಡಿದ್ದಾರೆ. ಭಕ್ತಿ ಹಾಗೂ ಜ್ಞಾನ ಪಂಥವನ್ನು ಸಮನ್ವಯ ಮಾಡಿ ಸರಿಯಾದ ಮಾರ್ಗ ತೋರಿದ್ದಾರೆ ಎಂದರು.
ಬ್ರಹ್ಮತತ್ವ ಹಾಗೂ ಕರ್ಮತತ್ವ ಶ್ರೇಷ್ಠ ಆಗಿರುವುದರಿಂದ ಅದನ್ನು ಅಧ್ಯಯನ ಮಾಡಲು ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ಅಧ್ಯಯನಕ್ಕೆ ಬಲ ಬರುವುದಿಲ್ಲ. ನಿಯಮಗಳನ್ನು ಪಾಲಿಸದೆ ನೀಡುವ ಉಪದೇಶಗಳಿಗೆ ಹೆಚ್ಚು ಗೌರವ, ಅಧಿಕಾರವೂ ಇರುವುದಿಲ್ಲ ಎಂದು ತಿಳಿಸಿದರು.
ಕರ್ಮಗಳನ್ನು ಶ್ರದ್ಧೆಯಿಂದ ಮಾಡಿದಾಗ ಫಲ ಪ್ರಾಪ್ತಿಯಾಗುತ್ತದೆ. ವೈದಿಕ ಪರಂಪರೆಯಲ್ಲಿ ಸಾಕಷ್ಟು ನಿಯಮಗಳಿವೆ. ಆಚರಣೆ ಮಾಡಲು ಸಾಕಷ್ಟು ಕಷ್ಟಪಡಬೇಕು. ಏಕೆಂದರೆ ಶ್ರೇಷ್ಠವಾದುದನ್ನು ಪಾಲನೆ ಮಾಡಲು ಇವೆಲ್ಲವೂ ಅನಿವಾರ್ಯ. ಇದನ್ನು ಪಾಲಿಸಿದರೆ ಮುಂದೆ ಭಗವಂತನ ಅನುಗ್ರಹ ಖಂಡಿತವಾಗಿಯೂ ದೊರಕುತ್ತದೆ ಎಂದರು.
ಪ್ರಪಂಚದಲ್ಲಿ ಯಾರಿಗೂ ಸಿಗದ ವೈದಿಕ ಪರಂಪರೆ ನಮಗೆ ಸಿಕ್ಕಿದೆ. ಹೀಗಾಗಿ ಇದನ್ನು ಕರ್ತವ್ಯ ಎಂದುಕೊಂಡು ಅನುಸರಣೆ ಮಾಡಿ ಮುಂದಿನ ಪೀಳಿಗೆಗೆ ತಲುಪಿಸಬೇಕು. ಆಧುನಿಕ ವಾತಾವರಣದ ಪ್ರಭಾವ ವೈದಿಕ ಪರಂಪರೆ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು ಎಂದು ಶ್ರೀಗಳು ತಿಳಿಸಿದರು.
ಶಾರದಾ ವಿಲಾಸ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ವಿಧುಶೇಖರ ಭಾರತೀ ಶ್ರೀಗಳು ಬುಧವಾರ ಶಿಲಾನ್ಯಾಸ ನೆರವೇರಿಸಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಆರ್‌ಎಸ್‌ಎಸ್ ಪ್ರಮುಖ ಮಧುಕರ್, ಶಾರದಾ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಎಂ.ಎಸ್.ಚಂದ್ರಶೇಖರ ಅವಧಾನಿ ಇದ್ದರು.
ಆಚರಣೆ ಮೌಢ್ಯವಲ್ಲ
ನಮ್ಮ ಆಚರಣೆಗಳನ್ನು ಕೆಲವರು ಮೂಢನಂಬಿಕೆ ಎನ್ನುತ್ತಾರೆ. ಮೂಢನಂಬಿಕೆ ಎಂಬುದರ ಮೂಲ ಶಬ್ಧ ಸಂಸ್ಕೃತದಲ್ಲಿ ಅಂಧಶ್ರದ್ಧೆ. ವ್ಯಾಕರಣ ಶಾಸ್ತ್ರವೇ ಅಂಧಶ್ರದ್ಧೆ ಎಂಬ ಪದ ನೀಡಿದೆ. ಹೀಗಾಗಿ ಶಾಸ್ತ್ರದಲ್ಲಿ ಇದಕ್ಕೊಂದು ಅರ್ಥವೂ ಇದೆ ಎಂಬುದು ನಿಚ್ಚಳ. ಹೀಗಾಗಿ ಈ ಪದದ ತಪ್ಪು ಪ್ರಯೋಗ ಸರಿಯಲ್ಲ ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಗುರಿ ಮುಟ್ಟಲು ಗುರುವಿನ ಅನುಗ್ರಹ ಅವಶ್ಯ ಎಂದು ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್ ಹೇಳಿದರು. ಸಂಸ್ಕೃತ, ವೇದ, ವೇದಾಂತ ಹಾಗೂ ನಮ್ಮ ಪ್ರಾಚೀನ ವಿದ್ಯೆಯನ್ನು ಯಥಾವತ್ ಉಳಿಸಿಕೊಂಡು ಅದನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತಿರುವುದು ಶೃಂಗೇರಿ ಯತಿ ಪರಂಪರೆ. ಕಾಲೋಚಿತವಾಗಿ ಅನೇಕ ಸಾಮಾಜಿಕ ಆಯಾಮಗಳನ್ನು ಈ ಪರಂಪರೆ ನೀಡಿದೆ. ಕರೊನಾ ಅವಧಿಯಲ್ಲಿ ಪ್ರಧಾನಿ ಪರಿಹಾರ ನಿಧಿಗೆ ಶೃಂಗೇರಿ ಪೀಠದಿಂದ ಒಂದು ಕೋಟಿ ರೂ. ದೇಣಿಗೆ ನೀಡಲಾಗಿತ್ತು. ಸೈನಿಕರ ಆಸ್ಪತ್ರೆಗೆ ಶೃಂಗೇರಿ ಶ್ರೀಗಳು 30 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಮೂರು ತಿಂಗಳ ಹಿಂದೆ ಚಿತ್ರದುರ್ಗದ ಹಿಂದೂ ಸಮಾಜೋತ್ಸವದಲ್ಲಿ ವಿಧುಶೇಖರ ಶ್ರೀಗಳು ನೀಡಿದ ಆಶೀರ್ವಚನ ಮುಂದಿನ 100 ವರ್ಷಗಳಿಗೆ ಸಂದೇಶವಾಗಿದೆ ಎಂದರು.
ಮೂರು ದಿನ ವಿವಿಧ ಕಾರ್ಯಕ್ರಮ
ಸೋಮವಾರ ಸಂಜೆ ಮತ್ತೂರು ಪುರಪ್ರವೇಶ ಮಾಡಿದ ವಿಧುಶೇಖರ ಶ್ರೀಗಳು, ರಾತ್ರಿ ಚಂದ್ರಮೌಳೀಶ್ವರನಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ಬೆಳಗ್ಗೆ 8ಕ್ಕೆ ಗಾಯತ್ರಿ ಹಾಗೂ ಲಲಿತಾ ಹೋಮ ಆರಂಭವಾಯಿತು. ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವೇದಾಂತ ಗೋಷ್ಠಿಯಲ್ಲಿ ವಿದ್ವಾಂಸರು ಭಾಗವಹಿಸಿದ್ದರು. ಉಪನಿಷತ್, ವೇದ, ಭಾಷ್ಯ ಸೇರಿ ಧರ್ಮ ಹಾಗೂ ಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಜಿಜ್ಞಾಸೆಗಳ ಕುರಿತು ವಿದ್ವಾಂಸರು ಗೋಷ್ಠಿಯಲ್ಲಿ ವಿಚಾರ ಮಂಡಿಸಿದರು. ವಿಧುಶೇಖರ ಶ್ರೀಗಳು ಅನೇಕ ವಿಚಾರಗಳಿಗೆ ಸ್ಪಷ್ಟತೆ ನೀಡಿದರು. ನಂತರ ಹೋಮಗಳ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶಾರದಾ ವಿಲಾಸ ಶಾಲೆ ಆವರಣದಲ್ಲಿ ಗ್ರಾಮಸ್ಥರಿಗೆ ಗುರುಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಂಜೆ ಜಗದ್ಗುರುಗಳ ರಾಜಬೀದಿ ಉತ್ಸವ ನೆರವೇರಿತು. ಶ್ರೀಗಳ ಉಪಸ್ಥಿತಿಯಲ್ಲಿ ತುಂಗಾ ನದಿಯಲ್ಲಿ ಭಜನೆಯೊಂದಿಗೆ ತೆಪ್ಪೋತ್ಸವ ನಡೆಯಿತು. ಬುಧವಾರ ಶ್ರೀಗಳು ರುದ್ರಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ನೂತನ ಶಿಲಾಮಯ ದತ್ತಗುಡಿಯಲ್ಲಿ ಪುಷ್ಪಾರ್ಚನೆ ನೇರವೇರಿಸಿದರು. ಬಳಿಕ ಸಪ್ತರ್ಷಿಧಾಮ ಶಿವಾಲಯಕ್ಕೆ ಭೇಟಿ ನೀಡಿದರು.
ನಮ್ಮ ಪರಂಪರೆಯನ್ನು ಕಾಪಾಡಿಕೊಂಡು ಬರಲು ಹಿರಿಯರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನೂ ಎಲ್ಲರೂ ಅರಿಯಬೇಕು. ಪೂಜೆ, ಪುನಸ್ಕಾರ, ಅನುಷ್ಠಾನ, ಆಚರಣೆಗಳನ್ನು ಬಂಧನ ಎಂದು ಭಾವಿಸುವುದು ಸರಿಯಲ್ಲ. ಇದರಿಂದ ಸ್ವಾತಂತ್ರೃಹರಣ ಎಂದುಕೊಳ್ಳಬಾರದು. ವೈದಿಕ ಪರಂಪರೆ ಬಂಧನವಲ್ಲ. ಬಂಧಮುಕ್ತಗೊಳಿಸುವ ಮಾರ್ಗ.