ಭದ್ರಾವತಿಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಚಾಲನೆ ನೀಡಿದರು. ಗೀತಾ ರಾಜ್‌ಕುಮಾರ್, ಡಾ. ಎಂ.ವಿ.ಅಶೋಕ್, ಅನುಸುಧಾ ಮೋಹನ್, ಡಾ. ಟಿ.ಶಂಕ್ರಪ್ಪ ಇತರರಿದ್ದರು. 
ಶಿವಮೊಗ್ಗ

ಮಹಿಳೆಯರ ಪಾತ್ರ ಮುಖ್ಯ

ಭದ್ರಾವತಿ: ಆರೋಗ್ಯಯುತ ಸಮಾಜ ನಿರ್ಮಾಣ ದೇಶದ ಗುರಿಯಾಗಿದ್ದು, ಪೋಲಿಯೋ ನಿಯಂತ್ರಣಕ್ಕಾಗಿ ಸರ್ಕಾರ ನೀಡುತ್ತಿರುವ ಲಸಿಕೆಯನ್ನು 5 ವರ್ಷದೊಳಗಿನ ಮಗುವಿಗೆ ಹಾಕಿಸುವ ಮೂಲಕ ತಾಯಂದಿರು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯೆಬಲ್ಕಿಶ್ ಬಾನು ಹೇಳಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಕುಟುಂಬದಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ. ಗರ್ಭಿಣಿಯರು ಸಕಾಲಕ್ಕೆ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವ ಹಾಗೂ ಮಕ್ಕಳಿಗೂ ಹಾಕಿಸುವುದನ್ನು ಮರೆಯಬಾರದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ.ಅಶೋಕ್ ಮಾತನಾಡಿ, ತಾಲೂಕಿನಲ್ಲಿ 179 ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ನಿರ್ಮಲಾ ಆಸ್ಪತ್ರೆ, ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 675 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 22,354 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ನಗರ ಪ್ರದೇಶದಲ್ಲಿ 4, ಗ್ರಾಮೀಣ ಭಾಗದಲ್ಲಿ 3 ದಿನ ನಡೆಯಲಿದೆ  ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಸುಧಾ ಮೋಹನ್, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಟಿ.ಶಂಕ್ರಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಆನಂದಮೂರ್ತಿ, ವಸಂತ. ರುದ್ರಮ್ಮ, ಶೀಲಾ ಮೇರಿ ಇತರರಿದ್ದರು.