ರಿಪ್ಪನ್‌ಪೇಟೆ ಸಮೀಪದ ಹಿಂಡ್ಲೆಮನೆ ಸರ್ಕಾರಿ ಶಾಲೆ ಸುವರ್ಣ ಮಹೋತ್ಸವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸನ್ಮಾನಿಸಲಾಯಿತು. ಎಚ್.ಕೆ.ದೇವರಾಜ್, ಪವಿತ್ರಾ ಸಂದೀಪ, ಜಯಪ್ರಕಾಶ ಶೆಟ್ಟಿ, ಸುಧಾಕರ್ ಇತರರಿದ್ದರು.
ರಿಪ್ಪನ್‌ಪೇಟೆ: ಹೆಬ್ಬೆಟ್ಟಿನ ಗುರುತು ಒತ್ತುತಿದ್ದ ಜನರಿಗೆ ಸಹಿ ಮಾಡುವುದನ್ನು ಕಲಿಸಿದ ಶಾಲೆಯ ಸುವರ್ಣ ಮಹೋತ್ಸವ ಗ್ರಾಮಸ್ಥರ ಸಂತಸ, ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೋಡೂರು ಗ್ರಾಪಂ ವ್ಯಾಪ್ತಿಯ ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಡಿದ ಉಪಕಾರವನ್ನೇ ಮರೆತುಹೋಗುವ ಕಾಲವಿದು. ಸಣ್ಣ ಗ್ರಾಮವಾದರೂ ಇಲ್ಲಿ ಕಲಿತ ಎಲ್ಲರೂ ಸೇರಿ ಶಾಲೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಆಚರಿಸುತ್ತಿರುವುದು ಮಹತ್ತರವಾದುದು ಎಂದರು.
ಶಿಕ್ಷಣಕ್ಕೆ ಸಮಾಜ ಬದಲಾಯಿಸುವ ಶಕ್ತಿಯಿದೆ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವ ಶಾಲೆ ಊರಿನ ಅಭಿವೃದ್ಧಿಯಲ್ಲೂ ಪ್ರಮುಖವಾಗುತ್ತದೆ. ಕಳೆದ 50 ವರ್ಷಗಳಲ್ಲಿ ಓದಿದ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವುದು ಶಾಲೆ ಮತ್ತು ಊರಿನ ಗೌರವ ಹೆಚ್ಚಿಸಿದೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಹಾಗೂ ಹೆಚ್ಚು ಗೌರವ ತಂದುಕೊಡುವ ಕೆಲಸವೇ ಶಿಕ್ಷಕ ವೃತ್ತಿ. ಶಾಲೆಗೆ ಅಗತ್ಯವಿರುವ ಶೌಚಗೃಹ, ಗ್ರಾಮದ ರಸ್ತೆ ಅಭಿವೃದ್ಧಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್.ಕೆ.ದೇವರಾಜ್, ಉಪಾಧ್ಯಕ್ಷೆ ಪವಿತ್ರಾ ಸಂದೀಪ, ಕೋಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಶೇಖರಪ್ಪ, ಚಂದ್ರಕಲಾ, ಅನ್ನಪೂರ್ಣಾ ಮಹೇಶ, ಉಮೇಶ, ಸುನಂದಾ ನಾಗರಾಜ್, ಶ್ಯಾಮಲಾ ಶೇಖರಪ್ಪ, ಯೋಗೇಂದ್ರ, ರೇಖಾ ನಾಗರಾಜ್, ಮಂಜಪ್ಪ, ಬಿಇಒ ವೈ.ಗಣೇಶ, ಮುಖ್ಯಶಿಕ್ಷಕ ಲಿಂಗಪ್ಪ, ಪಿಡಿಒ ನಾಗರಾಜ್ ಇತರರಿದ್ದರು.