ಶಿಕಾರಿಪುರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಡಾ. ಬಿ.ಡಿ.ಭೂಕಾಂತ್, ಪಿ.ಪರಮೇಶ್ವರಪ್ಪ, ಡಿ.ಎಲ್.ಬಸವರಾಜ್ ಇತರರಿದ್ದರು.
- ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆ
- ಉಚಿತ ಆರೋಗ್ಯ ತಪಾಸಣಾ ಶಿಬಿರ
- ಆರೋಗ್ಯದ ಕಾಳಜಿ ವಹಿಸಿ
ಶಿಕಾರಿಪುರ: ಸಹಕಾರ ತತ್ವ ಬದುಕಿನ ಮಹತ್ತರ ಅಂಶ. ಪ್ರತಿ ಹೆಜ್ಜೆಯಲ್ಲೂ ಸಹಕಾರ ಚಿಂತನೆಗಳು ಜೀವನವನ್ನು ಪ್ರಕಾಶಿಸುವಂತೆ ಮಾಡುತ್ತವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಬಸವೇಶ್ವರ ಸಹಕಾರ ಒಕ್ಕೂಟ, ತಾಲೂಕು ಸಹಕಾರ ಭಾರತಿ, ಸಹಕಾರ ಇಲಾಖೆ, ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಕ್ಷೇತ್ರದಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಿವೆ. ಗ್ರಾಮಾಂತರ ಪ್ರದೇಶದಲ್ಲಿ ರೈತರಿಗೆ ಉತ್ತಮ ಸೇವೆ ಒದಗಿಸುತ್ತಿವೆ ಎಂದು ತಿಳಿಸಿದರು.
ಗ್ರಾಮೀಣ ಆರ್ಥಿಕತೆ ಹಾಗೂ ರೈತರ ಬೆನ್ನೆಲುಬಾಗಿ ಶ್ರಮಿಸುವ ಸಹಕಾರ ಕ್ಷೇತ್ರದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಪ್ರಮುಖವಾಗಿದೆ. ಶಿಬಿರದ ಮೂಲಕ ಉಚಿತ ತಪಾಸಣೆ ಹಾಗೂ ಸೂಕ್ತ ಆರೋಗ್ಯದ ಮಾಹಿತಿ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
"
ಸಹಕಾರ ತತ್ವವು ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗಿರದೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಏಳಿಗೆ ಮತ್ತು ಪರಸ್ಪರ ಸಹಬಾಳ್ವೆಗೆ ಪೂರಕವಾಗಿದೆ. ಸಹಕಾರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ.
| ಬಿ.ವೈ.ರಾಘವೇಂದ್ರಲೋಕಸಭಾ ಸದಸ್ಯ
ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಬದುಕಿನಿಂದ ಆರೋಗ್ಯದ ಕಡೆಗೆ ಗಮನಹರಿಸುವುದು ಅಗತ್ಯವಾಗಿದೆ. ಆರೋಗ್ಯ ಉತ್ತಮವಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಶಿಬಿರದಲ್ಲಿ ನುರಿತ ವೈದ್ಯರ ತಂಡದಿಂದ ಸಾರ್ವಜನಿಕರಿಗೆ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕಣ್ಣು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ, ಉಚಿತವಾಗಿ ಔಷಧ ವಿತರಿಸಲಾಯಿತು. 500ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು. ಶಿವಮೊಗ್ಗದ ನಾರಾಯಣ ಹೃದಯಾಲಯದ ಡಾ. ಶರತ್, ಸರ್ಕಾರಿ ಆಸ್ಪತ್ರೆಯ ಡಾ. ಬಸವರಾಜ್ ತಳವಾರ್, ಆಡಳಿತ ವೈದ್ಯಾಧಿಕಾರಿ ಡಾ. ನಿರಂಜನ ಪಾಲ್ಗೊಂಡಿದ್ದರು.
ಸಹಕಾರಿ ಧುರೀಣ ಡಾ. ಬಿ.ಡಿ.ಭೂಕಾಂತ್, ಬಸವೇಶ್ವರ ಸಹಕಾರ ಒಕ್ಕೂಟದ ಅಧ್ಯಕ್ಷ ಪಿ.ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಮ್ಯಾಮ್ಕೋಸ್ ನಿರ್ದೇಶಕ ಚನ್ನವೀರಪ್ಪ, ರಾಜ್ಯ ಮಹಿಳಾ ಸಹಕಾರ ಮಂಡಳ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ಸುಧೀರ್ ಮಾರವಳ್ಳಿ, ಶಶಿಧರ್ ಚುರ್ಚಿಗುಂಡಿ, ರಾಘವೇಂದ್ರ, ವೀರನಗೌಡ ಇತರರಿದ್ದರು.