ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯುಕ್ತ ಕೆ.ಮಾಯಣ್ಣಗೌಡ ಬಿಎಲ್‌ಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.  
ಶಿವಮೊಗ್ಗ

ಚುನಾವಣಾ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳ ಪಾತ್ರ ಮಹತ್ವದ್ದು | BLO Training workshop

ಪ್ರಮುಖ ಮುಖ್ಯಾಂಶಗಳು

  • 80 ಬಿಎಲ್‌ಒಗಳಿಗೆ ಸಮಗ್ರ ತರಬೇತಿ ಕಾರ್ಯಾಗಾರ
  • ಮತದಾರರ ಪಟ್ಟಿಯು ಚುನಾವಣಾ ಪ್ರಕ್ರಿಯೆಯ ಮೂಲ ಆಧಾರ
  • ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹೇಳಿಕೆ
ಶಿವಮೊಗ್ಗ: ಚುನಾವಣಾ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ(Booth level officer)(ಬಿಎಲ್‌ಒ)ಗಳ ಪಾತ್ರ ಮಹತ್ವದ್ದಾಗಿದ್ದು, ಮತದಾರರ ಪಟ್ಟಿ ನಿರ್ವಹಣೆ, ಹೊಸ ಮತದಾರರ ಸೇರ್ಪಡೆ, ಮೃತರು ಹಾಗೂ ಸ್ಥಳಾಂತರಗೊಂಡವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು, ಮತದಾರರ ವಿವರಗಳ ತಿದ್ದುಪಡಿ ಸೇರಿ ಹಲವು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಮುಂಬರುವ ಚುನಾವಣಾ ಪ್ರಕ್ರಿಯೆ(Election process)ಗಳನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನೇಮಕಗೊಂಡ 80 ಬಿಎಲ್‌ಒಗಳಿಗೆ ಸಮಗ್ರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.
ಮತದಾರರ ಪಟ್ಟಿಯು ಚುನಾವಣಾ ಪ್ರಕ್ರಿಯೆಯ ಮೂಲ ಆಧಾರವಾಗಿದ್ದು, ಅದರ ಶುದ್ಧತೆ ಮತ್ತು ನಿಖರತೆಯನ್ನು ಕಾಪಾಡುವುದು ಪ್ರತಿಯೊಬ್ಬ ಬಿಎಲ್‌ಒ(BLO)ಗಳ ಕರ್ತವ್ಯ. ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲಿಸುವುದು. 18 ವರ್ಷ ಪೂರೈಸಿದ ಅರ್ಹ ಯುವ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ ಎಂದು ಹೇಳಿದರು.
ತರಬೇತಿ ವೇಳೆ ಮತದಾರರ ಪಟ್ಟಿ(Voter list)ಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ, ಆನ್‌ಲೈನ್ ಅರ್ಜಿಗಳ ಪರಿಶೀಲನೆ, ವಿವಿಧ ನಮೂನೆಗಳ ಬಳಕೆ, ಚುನಾವಣಾ ಆಯೋಗದ ಡಿಜಿಟಲ್ ಅಪ್ಲಿಕೇಶನ್‌ಗಳ ಉಪಯೋಗ, ಮತದಾರರ ಗುರುತಿನ ಚೀಟಿ(Voter ID card) ಸಂಬಂಧಿತ ಕಾರ್ಯಗಳು ಹಾಗೂ ಕ್ಷೇತ್ರಮಟ್ಟದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನಗಳ ಕುರಿತು ಬಿಎಲ್‌ಒಗಳಿಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಚುನಾವಣಾ ಶಾಖೆ(Election Branch)ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು, ಹೊಸ ದಾಗಿ ನೇಮಕಗೊಂಡ 80 ಬಿಎಲ್‌ಒಗಳು ಭಾಗವಹಿಸಿ ಚುನಾವಣಾ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
"

ಬಿಎಲ್‌ಒಗಳು ಜನಸಾಮಾನ್ಯರು ಮತ್ತು ಚುನಾವಣಾ ಇಲಾಖೆಯ ನಡುವಿನ ಪ್ರಮುಖ ಕೊಂಡಿಯಾಗಿದ್ದು, ಅವರ ಕಾರ್ಯಕ್ಷಮತೆಯ ಮೇಲೆ ಮತದಾರರ ಪಟ್ಟಿಯ ಗುಣಮಟ್ಟ ಅವಲಂಬಿತವಾಗಿರುತ್ತದೆ. ಆದ್ದರಿಂದ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಪಕ್ಷಪಾತತೆ, ಜವಾಬ್ದಾರಿ ಮತ್ತು ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು.

— ಕೆ.ಮಾಯಣ್ಣಗೌಡ, ಮಹಾನಗರ ಪಾಲಿಕೆ ಆಯುಕ್ತ