ಸೊರಬ ತಾಲೂಕಿನ ಬಂಕಸಾಣ ವರದಾ ತೀರದ ಸಮಾಧಾನ ಹಿರೇಮಠದಲ್ಲಿ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಅವರ ಅಧಿಕ ಜ್ಯೇಷ್ಠ ಮಾಸದ ಅನುಷ್ಠಾನ ಸಮಾರೋಪ ಸಮಾರಂಭದಲ್ಲಿ ಶ್ರೀ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ವಿಜಯಕುಮಾರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಜಗದೀಶ ಸ್ವಾಮೀಜಿ ಇತರರಿದ್ದರು.
ಸೊರಬ: ಸಾಧಕ ತನ್ನ ಆತ್ಮದ ಅರಿವಿಗಾಗಿ ಆಗಾಗ್ಗೆ ಅನುಷ್ಠಾನಗಳನ್ನು ಮಾಡುತ್ತ ಬಂದರೆ ಆತ್ಮ ಸಾಕ್ಷಾತ್ಕಾರ ಮಾರ್ಗ ಸುಲಭವಾಗುತ್ತದೆ ಎಂದು ಮೂಡಿ ಹಾಗೂ ತುರಬಿಗುಡ್ಡ ಸಂಸ್ಥಾನ ವಿರಕ್ತಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬಂಕಸಾಣ ವರದಾ ನದಿ ತೀರದ ಸಮಾಧಾನ ಹಿರೇಮಠದಲ್ಲಿ ಸೋಮವಾರ ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳ ಅಧಿಕ ಜ್ಯೇಷ್ಠ ಮಾಸದ ಅನುಷ್ಠಾನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರುಗಳು ವರ್ಷವಿಡೀ ಭಕ್ತರ ಹಿತಚಿಂತನೆ ಮಾಡುತ್ತಾರೆ. ಭಕ್ತರ ಕಷ್ಟಗಳನ್ನು ಆಲಿಸುತ್ತಾರೆ. ಸದಾ ಕಾಲವೂ ಭಕ್ತರ ಸಂಕಟ ಪರಿಹರಿಸುತ್ತ ಸಂಚಾರ ಮಾಡುತ್ತಾರೆ. ಹೀಗೆ ಮಾಡಲು ಅಂತರಂಗದ ಶಕ್ತಿ ಬೇಕಾಗುತ್ತದೆ. ಆ ಮನೋಬಲವನ್ನು ಗಳಿಸಿಕೊಳ್ಳುವ ಉತ್ತಮ ಮಾರ್ಗವೇ ಅನುಷ್ಠಾನ. ಏಕಾಂತದಲ್ಲಿದ್ದುಕೊಂಡು ಒಂದಷ್ಟು ನಿಯಮಗಳನ್ನು ಹಾಕಿಕೊಂಡು ಮಿತ ಆಹಾರ ಸೇವಿಸುತ್ತ ಅಂತರಂಗ ಜಾಗೃತಿಗಾಗಿ ಮಾಡುವ ವಿಶೇಷ ಸಾಧನೆಯೇ ಅನುಷ್ಠಾನ ಎಂದರು.
ಸಮ್ಮುಖ ವಹಿಸಿ ಮಾತನಾಡಿದ ಜಡೆ ಸಂಸ್ಥಾನ ಮಠದ ಶ್ರೀ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಭಾರತ ಪ್ರಸಿದ್ಧವಾಗಿರುವುದು ಆಧ್ಯಾತ್ಮಿಕ ಕಾರಣದಿಂದ. ಅಧ್ಯಾತ್ಮ ಈ ಮಣ್ಣಿನ ಉಸಿರು. ಅನೇಕ ಮಹಾತ್ಮರು ಈ ನಾಡನ್ನು ತಮ್ಮ ತಪಸ್ಸಿನ ಮೂಲಕ ಶ್ರೀಮಂತಗೊಳಿಸಿದ್ದಾರೆ. ಪೂಜ್ಯರ ಅನುಷ್ಠಾನ ಎಲ್ಲರ ಭಕ್ತಿಗೆ ಬೆಳಕಾಗಲಿ ಎಂದು ಆಶಿಸಿದರು.
ಕ್ಯಾಸನೂರಿನ ಶ್ರೀ ವಿಜಯಕುಮಾರ ದೇಶಿಕೇಂದ್ರ ಸ್ವಾಮೀಜಿ, ಬಾಸಿಯ ಶ್ರೀ ಜಗದೀಶ ಸ್ವಾಮೀಜಿ ಮಾತನಾಡಿದರು. ಪ್ರಾತಃಕಾಲ ಇಷ್ಟಲಿಂಗ ಮಹಾಪೂಜೆಯೊಂದಿಗೆ ಅಷ್ಟೋತ್ತರ ಪೂಜೆ ಹಾಗೂ ಕ್ಷೇತ್ರನಾಥ ಹೊಳೆಲಿಂಗೇಶ್ವರ ಮಹಾಸ್ವಾಮಿಗೆ ಅಭಿಷೇಕ ಪೂಜಾ ಕಾರ್ಯ ನೆರವೇರಿದವು.
ಜಡೆ ಬೇಡ ಜಂಗಮ ಸಮಾಜದ ಆಧ್ಯಕ್ಷ ಬಂಗಾರಸ್ವಾಮಿ, ನಾಗರಾಜ ಗೌಡ, ಶಿವಕುಮಾರ ಸ್ವಾಮಿ, ಶಿವಾನಂದ ಗೌಡ, ಮಹೇಶಪ್ಪ, ಬಸವರಾಜ ಗೌಡ, ಡಾ. ಬಸವೇಶ್ವರ ಗದ್ದಿಕೇರಿ, ಸಿದ್ದಲಿಂಗೇಶ್ವರ, ಶಿವ ಸಮೃದ್ಧ, ನಿಶ್ಚಿಂತ ಇತರರಿದ್ದರು.