ಮೂರು ವರ್ಷ ಕಳೆದರೂ ಇನ್ನೂ ಪಿಲ್ಲರ್​ ಹಂತದಲ್ಲಿರುವ ಶರಾವತಿ ಹಿನ್ನೀರಿನ ಬಿಲ್ಸಾಗರ ಸೇತುವೆ. 
ಶಿವಮೊಗ್ಗ

ಸಮಸ್ಯೆಯ ಆಗರ ಬಿಲ್ಸಾಗರ ಸೇತುವೆ

ಟಿ.ಎಚ್.ಸಂತೋಷ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • 24 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಕಾರ್ಯ
  • ವಿಳಂಬದಿಂದಾಗಿ ಗ್ರಾಮಸ್ಥರಿಗೆ ಭ್ರಮನಿರಸನ
  • ಸಮಸ್ಯೆಯ ಆಗರ ಬಿಲ್ಸಾಗರ ಸೇತುವೆ
ರವಿ ಬಿದನೂರು ಹೊಸನಗರ
ತಾಲೂಕಿನ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬಿಲ್ಸಾಗರ ಸೇತುವೆ ಕಾಮಗಾರಿ ಮೂರು ವರ್ಷ ಕಳೆದರೂ ಈವರೆಗೆ ಶೇ.50ರಷ್ಟು ಕೂಡಾ ಪೂರ್ಣವಾಗಿಲ್ಲ. ಶ್ರೀ ಮುಗಿಯಬಹುದೆಂಬ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ.
2022&23ರಲ್ಲಿ ಅರಮನೆಕೊಪ್ಪ ಮತ್ತು ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಕಳೆದ ಚುನಾವಣೆಗೆ ಮೊದಲು ಬಹಳ ಕಾಲದ ಬೇಡಿಕೆ, ಸತತ ಹೋರಾಟದ ಲವಾಗಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ದೊರೆಯಿತು. ಶರಾವತಿಯ ನದಿ ತಟದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ, ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದ್ದರು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತವಾಗಿತ್ತು.
ದಾವಣಗೆರೆ ಮೂಲದ ಕೆವಿಆರ್​ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದ್ದು, 2023ರ ಮಾ.24ರವರೆಗೆ ವರ್ಕ್​ ಅಗ್ರಿಮೆಂಟ್​ ನಡೆದಿತ್ತು. ಶಾಸಕರು ಸಹ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮೂರು ವರ್ಷ ಕಳೆದರೂ ಇನ್ನೂ ಪಿಲ್ಲರ್​ಗಳ ಹಂತದಲ್ಲೇ ಇದೆ.
ಕಳೆದ ಒಂದು ವರ್ಷದಿಂದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತವಾಗಿದೆ. ಸಂಗ್ರಹಿಸಿರುವ ಕಬ್ಬಿಣಗಳು ಮಾತ್ರವಲ್ಲದೆ ಪಿಲ್ಲರ್​ಗಳಿಗೆ ಅಳವಡಿಸಲಾದ ಕಬ್ಬಿಣ ಸಹ ಮೇಲ್ಭಾಗದಲ್ಲಿ ತುಕ್ಕುಹಿಡಿಯುತ್ತಿದೆ. ಈ ಬೆಳವಣಿಗೆಯಿಂದ ಸೇತುವೆಯ ಗುಣಮಟ್ಟದ ಬಗ್ಗೆ ಆತಂಕ ಪಡುವಂತಾಗಿದೆ.
ಅರಮನೆಕೊಪ್ಪ, ಸಂಪೆಕಟ್ಟೆ ಭಾಗದ ಸುಮಾರು ಸಾವಿರಕ್ಕ್ಕೂ ಹೆಚ್ಚು ಕುಟುಂಬಗಳಿಗೆ ಬಿಲ್ಸಾಗರ ಮಾರ್ಗ ಹತ್ತಿರದ ಸಂಪರ್ಕ. ನಗರ ಬಳಸಿ ಹೋಗುವುದಾದಲ್ಲಿ 30 ಕಿ.ಮೀ ಹೆಚ್ಚುವರಿ ಕ್ರಮಿಸುವುದು ಅನಿವಾರ್ಯ. ಆದರೆ ಬಿಲ್ಸಾಗರ ಮೂಲಕ ಸಂಪರ್ಕ 15 ಕಿ.ಮೀ ಮೀರುವುದಿಲ್ಲ. ಹೀಗಾಗಿ ಸೇತುವೆಗಾಗಿ ಈಭಾಗದ ಜನ ಇನ್ನಿಲ್ಲದ ಹೋರಾಟ ಮಾಡಿದ್ದು, ಸಾಕಷ್ಟು ಬಾರಿ ಮನವಿ ಸಲ್ಲಿಸಿದ ಪರಿಣಾಮ ಕಳೆದ ಸರ್ಕಾರದ ಅವಧಿಯಲ್ಲಿ ಸೇತುವೆ ಮಂಜೂರಾಗಿದ್ದರಿಂದ ಗ್ರಾಮಸ್ಥರು ಸಂಭ್ರಮಿಸಿದ್ದರು.
ಲಾಂಚ್​ ಅವ್ಯವಸ್ಥೆ
ಈ ಭಾಗದ ಗ್ರಾಮಸ್ಥರು ತಾಲೂಕು ಕೇಂದ್ರದ ಸಂಪರ್ಕಿಸಲು, ಬಿಲ್ಸಾಗರ ಶರಾವತಿ ಹಿನ್ನೀರಿನ ಪ್ರದೇಶ ದಾಟಲು ಕಳೆದ 3ದಶಕದಿಂದಲೂ ಮ್ಯಾನ್ಯುವಲ್​ ಲಾಂಚ್​ನ್ನು ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದರು. ಬೇಸಿಗೆಯಲ್ಲಿ ಹಿನ್ನೀರು ಖಾಲಿಯಾದ ಮೇಲೆ ಬೈಕ್​, ಕಾರು ಸಂಪರ್ಕಕ್ಕೆ ಅನುವಾಗುತ್ತಿತ್ತು. ಆದರೆ ಹಿನ್ನೀರು ತುಂಬಿದಾಗ ಐದಾರು ತಿಂಗಳು ಲಾಂಚ್​ ಪ್ರಯಾಣ ಅನಿವಾರ್ಯವಾಗಿತ್ತು. ನಂತರದಲ್ಲಿ ಲಾಂಚ್​ ವ್ಯವಸ್ಥೆಗೆ ಕೆಪಿಸಿ, ಸರ್ಕಾರ ಸಹಕಾರ ನೀಡಿವೆ. ಇದೀಗ ಲಾಂಚ್​ ಸಂಪೂರ್ಣ ಶಿಥಿಲವಾಗಿದ್ದರೂ ಗ್ರಾಮಸ್ಥರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಕಾರಣ ಇನ್ನೇನು ಸೇತುವೆ ನಿರ್ಮಾಣಗೊಂಡು ಸಂಪರ್ಕಕ್ಕೆ ಸಿಗಬಹುದು ಎಂಬ ನಂಬಿಕೆಯಿತ್ತು. ಆದರೆ ಮೂರು ವರ್ಷ ಕಳೆದರೂ ಪೂರ್ಣವಾಗುವ ಲಣ ಕಂಡುಬರುತ್ತಿಲ್ಲ. ಇತ್ತ ಲಾಂಚ್​ ಕೂಡ ಶಿಥಿಲಗೊಂಡಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಲೋಕೋಪಯೋಗಿ ಸಚಿವರಿಗೆ ಮನವಿ
ಹುಲಿಕಲ್​ ಘಾಟ್​ ದುರಂತ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ಸ್ಥಳಿಯರಾದ ತರುವೆ ಕೃಷ್ಣ, ಗೋಪಾಲ ಅರಮನೆಕೊಪ್ಪ, ಶಶಿಕಿರಣ, ಶ್ರೇಯಾಂಕ್​ ಒಳಗೊಂಡ ನಿಯೋಗ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಮೂಲಕ ಮನವಿ ಸಲ್ಲಿಸಿದೆ. ಈ ವೇಳೆ ಹಾಜರಿದ್ದ ಶಾಸಕ ಆರಗ ಜ್ಞಾನೇಂದ್ರ ಕೂಡ ಕಾಮಗಾರಿ ವಿಳಂಬ, ಸಂಪರ್ಕ ಸಂಕಷ್ಟದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರು ಸೂಕ್ತ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸೇತುವೆ ಜತೆಯಲ್ಲೇ ಮಂಜೂರಾದ ಕೊಪ್ಪ, ಎನ್​.ಆರ್​.ಪುರ ಸೇತುವೆಗಳು ಪೂರ್ಣವಾಗಿ ಸಿಎಂ ಉದ್ಘಾಟನೆ ಮಾಡಿದ್ದಾರೆ. ಸ್ವಲ್ಪ ದೂರದಲ್ಲಿರುವ ನೂರಾರು ಕೋಟಿ ರೂ. ವೆಚ್ಚದ ಹಸಿರುಮಕ್ಕಿ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಬಿಲ್ಸಾಗರ ಸೇತುವೆ ಬಗ್ಗೆ ಯಾಕಿಷ್ಟು ಕಡೆಗಣನೆ ಎಂಬುದು ಜನರ ಪ್ರಶ್ನೆ.
ಆರಗ ಅವಧಿಯಲ್ಲೇ ಆಗಲಿ: ಬಿಲ್ಸಾಗರ ಸೇತುವೆ ಕಳೆದ ಸರ್ಕಾರದ ಆಡಳಿತಾವಧಿಯಲ್ಲಿ ಮಂಜೂರಾಗಿತ್ತು. ಆಗ ಆರಗ ಜ್ಞಾನೇಂದ್ರ ಶಾಸಕರಾಗಿದ್ದರು. ಪ್ರಸ್ತುತ ಆರಗ ಜ್ಞಾನೇಂದ್ರ ಅವರೇ ಶಾಸಕರಾಗಿರುವ ಕಾರಣ ಅವಧಿ ಮುಗಿಯುವುದರೊಳಗೆ ಸೇತುವೆ ಲೋಕಾರ್ಪಣೆ ಆಗಲಿ ಎಂಬುದು ಸ್ಥಳಿಯರ ಆಶಯ.
----------------
ಸಾಕಷ್ಟು ವರ್ಷಗಳ ಹೋರಾಟದ ಮೂಲಕ ಪಡೆದುಕೊಂಡಿದ್ದ ಬಿಲ್ಸಾಗರ ಸೇತುವೆಯ ಆಮೆಗತಿಯ ಕಾಮಗಾರಿ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಭಾಗದ 5 ಸಾವಿರಕ್ಕೂ ಹೆಚ್ಚು ಜನರಿಗೆ ಈ ಸೇತುವೆ ಬಗ್ಗೆ ಬಾರಿ ನಿರೀೆ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ಸ್ಪಂದನೆ ನೀಡಿ ಕಾಮಗಾರಿಗೆ ಚುರುಕು ಮುಟ್ಟಿಸಬೇಕು.
> ಕೃಷ್ಣ ತರುವೆ, ಸ್ಥಳಿಯ ನಿವಾಸಿ
-------------
ಶಾಸಕ ಆರಗ ಜ್ಞಾನೇಂದ್ರ ಹೋರಾಟದ ಲವಾಗಿ ಈ ಭಾಗಕ್ಕೆ ಕಳೆದ ಅವಧಿಯಲ್ಲಿ ಸೇತುವೆ ಮಂಜೂರಾಗಿ ಕಾಮಗಾರಿ ನಡೆದಿತ್ತು. ಆದರೆ ವಿಳಂಬ ನಮಗೆ ನೋವು ತಂದಿದೆ. ಅಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಸ್ಪಂದಿಸಲಿ. ಶಾಸಕರ ಉದ್ದೇಶ ತುರ್ತಾಗಿ ಈಡೇರಲಿ.
> ಕೆ.ವಿ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ
-------------------------
ಬಿಲ್ಸಾಗರ ಸೇತುವೆ ಕಾಮಗಾರಿ ವಿಳಂಬದ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದೇನೆ. ಏನಾಗಿದೆ, ಏನಾಗಬೇಕು ಎಂಬುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
> ಸತೀಶ್​ ಜಾರಕಿಹೊಳಿ, ಲೋಕೋಪಯೋಗಿ ಸಚಿವ