ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಎಸ್‌ಐಆರ್ ಕುರಿತು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಕಿಮ್ಮನೆ ರತ್ನಾಕರ್ ಮಾತನಾಡಿದರು. ಆರ್.ಪ್ರಸನ್ನಕುಮಾರ್, ಬಲ್ಕಿಶ್ ಬಾನು, ಎಚ್.ಎಸ್.ಸುಂದರೇಶ್, ಎನ್.ರಮೇಶ್, ಜಿ.ಪಲ್ಲವಿ, ಕಲಗೋಡು ರತ್ನಾಕರ್ ಇದ್ದರು.
- ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ
- ಜಿಲ್ಲಾ ಕಾಂಗ್ರೆಸ್‌ನಿಂದ ಶಿವಪ್ಪನಾಯಕ ವೃತ್ತದಲ್ಲಿ ಬಹಿರಂಗ ಸಭೆ
- ನುಸುಳುಕೋರರ ಪತ್ತೆ ಹಚ್ಚುವ ನೆಪದಲ್ಲಿ ಸಾಮಾನ್ಯ ಜನರಿಗೆ ತೊಂದರೆ
ಶಿವಮೊಗ್ಗ: ಎಸ್‌ಐಆರ್ (sir) (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ)ಗೆ ಒಂದು ತಿಂಗಳ ಮಿತಿ ವಿಧಿಸಿರುವುದು ಅವೈಜ್ಞಾನಿಕ. (unscientific) ತರಾತುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ (kimmane) ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ಎಸ್‌ಐಆರ್ ಕುರಿತು ಸೋಮವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಇನ್ನಷ್ಟು ದಿನ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಳಿಕ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿವೆ. ಪಶ್ಚಿಮ ಬಂಗಾಳದಲ್ಲಿ ಸುಮಾರು 91ಲಕ್ಷ ಜನರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಸ್ತಾಪಿಸಿದ ಅವರು ನುಸುಳುಕೋರರನ್ನು ಪತ್ತೆ ಹಚ್ಚುವ ನೆಪದಲ್ಲಿ ಸಾಮಾನ್ಯ ಜನರನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ ಎರಡು ವರ್ಷಗಳ ಕಾಲಾವಕಾಶಬೇಕು. ಆದರೆ ಕೇವಲ 30 ದಿನಗಳೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರುವುದು ಸಾಮಾನ್ಯ ಜನರಿಗೆ ಬಿಸಿತುಪ್ಪವಾಗಿದೆ. ಒಂದೇ ವ್ಯಕ್ತಿಯ ಹೆಸರು ಆಧಾರ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗಿದ್ದರೆ, ಸಣ್ಣ ಲೋಪವಿದ್ದರೂ ಮತದಾರರ ಪಟ್ಟಿಯಿಂದ ಹೊರಬೀಳುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮದುವೆಯಾದ ಮಹಿಳೆಯರ ತಂದೆಯ ಹೆಸರು ಹಾಗೂ ಗಂಡನ ಹೆಸರಿನ ಬದಲಾವಣೆ, ವಿವಿಧ ಜಿಲ್ಲೆಗಳಿಂದ ದುಡಿಮೆಗಾಗಿ ವಲಸೆ ಬಂದ ಕಾರ್ಮಿಕರು, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಸೇರಿದಂತೆ ಹಲವು ವರ್ಗದ ಜನರಿಗೆ 30 ದಿನಗಳಲ್ಲಿ ದಾಖಲೆಗಳನ್ನು ಒದಗಿಸುವುದು ಅಸಾಧ್ಯ. ಆರ್‌ಟಿಸಿ ಬದಲಾವಣೆಗೂ ಮೂರು ತಿಂಗಳು ತೆಗೆದುಕೊಳ್ಳುವ ಸರ್ಕಾರದ ವ್ಯವಸ್ಥೆಯಲ್ಲಿ, ಮತದಾರರ ದಾಖಲೆಗಳನ್ನು ಕೇವಲ 30 ದಿನಗಳಲ್ಲಿ ಪೂರ್ಣಗೊಳಿಸುವಂತೆ ಹೇಳುವುದು ವಾಸ್ತವವಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಶಾಸಕ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಪ್ರಮುಖರಾದ ಎನ್.ರಮೇಶ್, ವಿಜಯಕುಮಾರ್ ಮುಂತಾದವರು ಸಭೆಯಲ್ಲಿದ್ದರು.
ಮತದಾನದ ಹಕ್ಕು ಉಳಿಸಿಕೊಳ್ಳಬೇಕು
ಈ ದೇಶದ ಪ್ರಜೆಗಳಿಗೆ ಮತದಾನದ ಹಕ್ಕು ಸಿಕ್ಕಿರುವುದು ಬಿಜೆಪಿಯಿಂದಲ್ಲ. ಬದಲಿಗೆ ಸಂವಿಧಾನದಿಂದ. ನಮ್ಮ ಪಾಲಿಗೆ ಸಂವಿಧಾನವೇ ದೇವರು. ನಮ್ಮ ಹಕ್ಕನ್ನು ನಾವು ಉಳಿಸಿಕೊಳ್ಳುವ ಮೂಲಕ ಬಿಜೆಪಿಯ ದುರುದ್ದೇಶವನ್ನು ತಡೆಯಬೇಕು ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.
ನಾವು ನಮ್ಮ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂವಿಧಾನದ ಪ್ರಕಾರ ನಾವು ಏನು ಮಾಡಬೇಕೋ ಅದನ್ನು ಮಾಡೋಣ. ಎಲ್ಲದ್ದಕ್ಕೂ ಉತ್ತರವಿದೆ. ನಿವಾಸಿ ಧೃಡೀಕರಣ ಸಮಸ್ಯೆ ಇದ್ದಲ್ಲಿ ನಾವೇ ಮುಂದೆ ನಿಂತು ಪರಿಹಾರ ಕಲ್ಪಿಸೋಣ. ಎಲ್ಲರಿಗೂ ಮತದಾನದ ಹಕ್ಕು ಉಳಿಯುವಂತೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
"
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಯಾರ ಮತವೂ ಕಡಿತವಾಗದಂತೆ, ಅರ್ಹರಾದ ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಪ್ರತಿ ಪ್ರಜೆಗೂ ಕೇಂದ್ರ ಸರ್ಕಾರದ ಸಂಚನ್ನು ವಿವರಿಸಬೇಕು.
— ಬಲ್ಕಿಶ್ ಬಾನು, ವಿಧಾನ ಪರಿಷತ್ ಸದಸ್ಯೆ.