ಶಿಕಾರಿಪುರದಲ್ಲಿ ಕಸಾಪ ದತ್ತಿ ಉಪನ್ಯಾಸವನ್ನು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ್ ಉದ್ಘಾಟಿಸಿದರು. ಎಚ್.ಎಸ್.ರಘ ು, ಎ.ಬಿ.ಸುಧೀರ್ ಸುದರ್ಶನ್, ಸುಭಾಷ್‌ಚಂದ್ರ ಸ್ಥಾನಿಕ್, ಬಂಗಾರಪ್ಪ ಇತರರಿದ್ದರು.
- ಉಪನ್ಯಾಸಕ ಎ.ಬಿ.ಸುಧೀರ್ ಅಭಿಮತ
- ಸರ್ಕಾರಿ ಪಿಯು ಕಾಲೇಜಿನಲ್ಲಿ ಕಸಾಪ ದತ್ತಿ ಕಾರ್ಯಕ್ರಮ
- ಕಾಯಕ ತತ್ವ ಪ್ರತಿಪಾದಿಸಿದ್ದ ಶರಣರು
ಶಿಕಾರಿಪುರ: ಕಾಯಕ, ದಾಸೋಹ ಮತ್ತು ಸಹಬಾಳ್ವೆ ಶರಣರ ನಿತ್ಯಮಂತ್ರ ಆಗಿದ್ದವು ಎಂದು ಉಪನ್ಯಾಸಕ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎ.ಬಿ.ಸುಧೀರ್ ಹೇಳಿದರು.
ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ತ್ಯಾಗರ್ತಿ ಗೌರಮ್ಮ ಮತ್ತು ಸಿದ್ದಪ್ಪ ದತ್ತಿ, ಎಚ್.ಮೃತ್ಯುಂಜಯಪ್ಪ ಈಶ್ವರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಮಾತನಾಡಿದರು.
ಶರಣರು ನುಡಿದಂತೆ ನಡೆದ ಮಾನವತಾವಾದಿಗಳು. 12ನೇ ಶತಮಾನದಲ್ಲಿ ಶರಣರು ಸಮಾಜದ ಓರೆಕೋರೆಗಳನ್ನು ತಿದ್ದಿ ಸಹಭೋಜನ, ಸಹಬಾಳ್ವೆ, ಸದ್ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥ ಆಗುವ ರೀತಿ ಸರಳ ಭಾಷೆಯಲ್ಲಿ ವಚನ ಸಾಹಿತ್ಯದ ಮೂಲಕ ತಿಳಿಸಿದರು. ಹೊಸ ಸಮಾಜ ನಿರ್ಮಾಣ ಮಾಡುವ ಕನಸು ಕಂಡಿದ್ದರು ಎಂದರು.
ಕಾಯಕ ತತ್ವ ಪ್ರತಿಪಾದಿಸಿದ ಶರಣರು ಸಮಾಜದಲ್ಲಿದ್ದ ಮೌಢ್ಯದ ವಿರುದ್ಧ ಧ್ವನಿ ಎತ್ತಿದ್ದರು. ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕರು ಶಿಕಾರಿಪುರ ತಾಲೂಕಿನವರು ಎಂಬುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಕುರಿತು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಿ.ಸುದರ್ಶನ್ ಶಿವರಂಜನಿ ಮಾತನಾಡಿ, ಕನಕದಾಸರು ಮೋಹನ ತರಂಗಿಣಿ, ಹರಿಭಕ್ತ ಸಾರ, ರಾಮಧಾನ್ಯ ಚರಿತೆ, ನಳಚರಿತೆ ಕೃತಿ ಮೂಲಕ ಕನ್ನಡ ಸಾರಸತ್ವ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕನಕದಾಸರು ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಸಂತರಾಗಿದ್ದರು. ವೈಚಾರಿಕ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯ ರಚಿಸಿದ್ದರು ಎಂದರು.
ಕೆಲ ವಿದ್ಯಾರ್ಥಿಗಳು ಪಿಯು ವ್ಯಾಸಂಗ ಮಾಡುತ್ತಿದ್ದರೂ ಕನ್ನಡ ಸ್ಪಷ್ಟವಾಗಿ ಬರೆಯುತ್ತಿಲ್ಲ. ವಿದ್ಯಾರ್ಥಿಗಳು ಕನ್ನಡ ಬರೆಯುವುದನ್ನು ಸ್ಪಷ್ಟವಾಗಿ ಕಲಿಯಬೇಕು. ಈ ಕನ್ನಡ ನಾಡಿನಲ್ಲಿ ಜೀವಿಸುವ ನಾವು ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು.
ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ
ಕಸಾಪ ತಾಲೂಕು ಅಧ್ಯಕ ಎಚ್.ಎಸ್.ರಘು ಮಾತನಾಡಿ, ಬಸವಣ್ಣ, ಕನಕದಾಸರು ಸೇರಿ ಹಲವು ದಾರ್ಶನಿಕರು ಜಾತಿ ವ್ಯವಸ್ಥೆ ಹಾಗೂ ಮೌಢ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರಗಳನ್ನು ಅಳವಡಿಸಿಕೊಂಡು ಸಮಾಜಲ್ಲಿ ಉನ್ನತ ಸ್ಥಾನ ಹೊಂದಬೇಕು ಎಂದರು.
ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಭಾಷ್‌ಚಂದ್ರ ಸ್ಥಾನಿಕ್, ಕಾರ್ಯಕ್ರಮ ಸಂಚಾಲಕ ಬಂಗಾರಪ್ಪ, ದತ್ತಿದಾನಿ ಈರಣ್ಣ ಹಾದ್ರಿಹಳ್ಳಿ, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಮಂಜುನಾಥ್, ಉಪನ್ಯಾಸಕ ದಿನಕರ್, ಫಾಮಿಧಾ, ಸಂತೋಷ್, ಸುಜಾತಾ ಉಪಸ್ಥಿತರಿದ್ದರು.