ಎನ್.ಹೇಮಂತ್, ಜಿಪಂ ಸಿಇಒ, ಶಿವಮೊಗ್ಗ
- ಎಸ್‌ಎಸ್‌ಎಲ್‌ಸಿ ಫಲಿತಾಂಶ ಮಾತ್ರ ಗುರಿಯಲ್ಲ
- ಜಿಪಂ ಸಿಇಒ ಎನ್.ಹೇಮಂತ್ ಅಭಿಮತ
ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ (sslc) ಫಲಿತಾಂಶದಲ್ಲಿ ರಾಜ್ಯಕ್ಕೆ ಶಿವಮೊಗ್ಗ (shivamogga) ಎಷ್ಟನೇ ಸ್ಥಾನ ಪಡೆಯಲಿದೆ ಎಂಬ ಚರ್ಚೆಗಿಂತ ಪ್ರತಿಯೊಬ್ಬರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬುದರಲ್ಲಿ ನನಗೆ ಆಸಕ್ತಿ ಹೆಚ್ಚು. ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದವರು ಶಿಕ್ಷಣ (education) ಮೊಟಕುಗೊಳಿಸುವ ಅಪಾಯವಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಫೇಲಾದವರು ಮತ್ತೆ ಓದು ಮುಂದುವರಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅವರ ಬದುಕು ಮತ್ತೊಂದು ಮಗ್ಗುಲಿಗೆ ಹೊರಳುವ ಅಪಾಯವಿದೆ. ಕೆಲ ದಿನಗಳ ಹಿಂದೆ ಊರಗಡೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಭಾಗಿಯಾದವರೆಲ್ಲರೂ ಶಾಲೆಯಿಂದ ದೂರವುಳಿದವರು. ಹೀಗಾಗಿ ಮಕ್ಕಳು ಶಿಕ್ಷಣದಿಂದ ವಿಮುಖರಾಗದಂತೆ ನೋಡಿಕೊಳ್ಳುವುದೇ ಸವಾಲು ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಕೆಲ ಶಾಲೆಗಳಲ್ಲಿ ಬೆಳಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಹಲವು ಶಾಲೆಗಳಲ್ಲಿ ಸಂಜೆ ವೇಳೆ ವಿಶೇಷ ಬೋಧನೆ ಮಾಡಲಾಗುತ್ತದೆ. ಎಸ್‌ಡಿಎಂಸಿ ತೀರ್ಮಾನದಂತೆ ತರಗತಿ ನಡೆಯುತ್ತದೆ. ಹಿಂದೆ ಯಾವುದೇ ಸರ್ಕಾರಿ ನೌಕರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಎಸ್‌ಎಸ್‌ಎಲ್‌ಸಿ ಆಗಿತ್ತು. ಈಗ ದ್ವಿತೀಯ ಪಿಯುಸಿ ಉತ್ತೀರ್ಣ ಆಗಬೇಕು. ಹೀಗಾಗಿ ರಾಜ್ಯದಲ್ಲಿ ನಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎನ್ನುವುದಕ್ಕಿಂತ ಎಷ್ಟು ಮಕ್ಕಳು ಉತ್ತೀರ್ಣರಾದರು ಎಂಬುದೇ ಮುಖ್ಯವಾಗುತ್ತದೆ ಎಂದರು.
ಉಚಿತ ಕನ್ನಡಕ ವಿತರಣೆ
ಈ ಶೈಕ್ಷಣಿಕ ಸಾಲಿನಲ್ಲಿ ಅಂಧತ್ವಮುಕ್ತ ಶಿವಮೊಗ್ಗ ಅಭಿಯಾನದ ಮೂಲಕ ಶಾಲೆಗಳಲ್ಲಿ ಮಕ್ಕಳ ನೇತ್ರ ತಪಾಸಣೆ ನಡೆಸಿ 10 ಸಾವಿರ ಮಕ್ಕಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಇದರಿಂದ ಅವರ ದೃಷ್ಟಿ ಸಮಸ್ಯೆ ನಿವಾರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಪೂರ್ತಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.