ಜಿ.ಆರ್ ಪಂಡಿತ್ ಮನೆಯಂಗಳದಲ್ಲಿ ಪಕ್ಷಿಗಳ ಕಲರವ.
ಸಾಗರ: ಇರುವ ಜಾಗದಲ್ಲಿಯೇ ಮನೆಯಂಗಳದಲ್ಲಿ ಪಕ್ಷಿಗಳ ಬದುಕಿಗೊಂದು ಗುಟುಕು ನೀರು, ಆಹಾರ ನೀಡುವ ಪ್ರಯತ್ನ ಸಾಗರದ ಹಲವು ಬಡಾವಣೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ಸಾಗರದ ಗಾಂಧಿನಗರ ಮತ್ತು ವಿಜಯನಗರದಲ್ಲಿ ಪರಿಸರ ಪ್ರಿಯರು ಪ್ರಾಣಿ, ಪಕ್ಷಿಗಳ ಪ್ರೀತಿಯಿಂದಾಗಿ ಅವುಗಳಿಗೆ ಸಹಕರಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧಿನಗರ ಬಡಾವಣೆಯ ಕೆಎಚ್‌ಬಿ ಕಾಲನಿಯಲ್ಲಿ ವಾಸವಾಗಿರುವ ಹವ್ಯಾಸಿ ಛಾಯಾಗ್ರಾಹಕ ಜಿ.ಆರ್.ಪಂಡಿತ್ ತಮ್ಮ ಮನೆಯಂಗಳದಲ್ಲಿಯೇ ಹಕ್ಕಿಗಳಿಗೆ ಆಶ್ರಯ ನೀಡಿದ್ದಾರೆ. ಬರುವ ಹಕ್ಕಿಗಳಿಗೆ ಕಾಳುಕಡಿ, ಕುಡಿಯಲು ನೀರು ಎಲ್ಲವನ್ನೂ ದೊರಕಿಸಿದ್ದಾರೆ. ತಮ್ಮ ಮನೆಯಂಗಳದ ತೋಟದಲ್ಲಿ ಪೈಪ್‌ಗಳನ್ನು ಅಳವಡಿಸಿ ವಿವಿಧ ವಿನ್ಯಾಸದ ಮಣ್ಣಿನ ಪಾತ್ರೆಗಳಲ್ಲಿ ಹಕ್ಕಿಗಳಿಗೆ ಆಹಾರವಿಟ್ಟು ಅವುಗಳ ಓಡಾಟಕ್ಕೆ ವಾತಾವರಣ ನಿರ್ಮಿಸಿ ಕೊಟ್ಟಿದ್ದಾರೆ. ಭತ್ತದಿಂದ ಹಿಡಿದು ವಿವಿಧ ಕಾಳುಗಳೂ ಕೂಡಾ ಪೆಟ್ಟಿಗೆಗಳಲ್ಲಿ ತೂಗುಹಾಕಿದ್ದಾರೆ. ಸ್ವಚ್ಚಂದವಾಗಿ ಹಕ್ಕಿಗಳು ಹಾರಾಡುತ್ತಾ ತೋಟಕ್ಕೆ ಬಂದು ಚಿಲಿಪಿಲಿಗುಟ್ಟಿ ಹಾರಾಡುತ್ತವೆ.
ಪಕ್ಷಿಗಳು ಹಾರಾಡುವಾಗ ಮೊದಲು ತಮಗೆ ಯಾರಿಂದಾದರೂ ಅಪಾಯವಿದೆಯೇ ಎಂದು ಪರಿಶೀಲಿಸುತ್ತವೆ. ಅವುಗಳ ಸ್ವಚ್ಚಂದ ಹಾರಾಟಕ್ಕೆ ಅಪಾಯವಿಲ್ಲ ಎಂದು ಖಾತ್ರಿಯಾದರೆ ಅಂತಹ ಪ್ರದೇಶಗಳು ಪಕ್ಷಿಗಳ ಮಾಯಾಲೋಕವಾಗಿ ಬಿಡುತ್ತವೆ. ಪಂಡಿತ್ ಅವರ ಮನೆಯಂಗಳ ಪಕ್ಷಿಲೋಕವನ್ನು ಪರಿಚಯಿಸುತ್ತದೆ. ಗುಬ್ಬಚ್ಚಿಯಿಂದ ಹಿಡಿದು ಮೈನಾ, ಬುಲ್-ಬುಲ್, ತರಹೇವಾರಿ ಗಿಳಿ, ಮಂಗಟ್ಟೆ, ಬಾರ್ಬೆನ್, ಕೋಗಿಲೆ ಹೀಗೆ ಹಲವು ಬಗೆಯ ಹಕ್ಕಿಗಳು ಮೇಳೈಸಿ ಸ್ವಲ್ವ ನೀರು ಕುಡಿದು ಅದರಲ್ಲಿಯೇ ಆಟವಾಡಿ ಸ್ನಾನ ಮಾಡುತ್ತವೆ. ಪಕ್ಷಿಗಳ ಗಾತ್ರಕ್ಕೆ ತಕ್ಕಂತೆ ಆಹಾರದ ಪಾತ್ರೆಗಳು ಇಲ್ಲಿವೆ. ಪ್ರತಿದಿನ ಇವರು ಹೂಜಿಯ ನೀರನ್ನು ಬದಲಿಸುತ್ತಾರೆ. ಕಾಳು, ಧಾನ್ಯಗಳು ಖಾಲಿಯಾದರೆ ಅದನ್ನು ತುಂಬಿಸುತ್ತಾರೆ.