ಸೊರಬದಲ್ಲಿ ಆಯೋಜಿಸಿದ್ದ ಗೃಹರಕ್ಷಕ ದಳ ದಿನಾಚರಣೆಯಲ್ಲಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಡಾ. ಎಂ.ಕೆ.ಭಟ್, ಡಾ. ಎಚ್.ಪಿ.ಚೇತನ್, ಡಾ. ಸೈಯದ್ ಹಾಷಂ, ಎಸ್.ಹಾಲಪ್ಪ ಇತರರಿದ್ದರು.
ಸೊರಬ: ಸಮಾಜದಲ್ಲಿ ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುವ ಮೂಲಕ ಶಾಂತಿ ಮತ್ತು ಶಿಸ್ತು ಪಾಲನೆಗೆ ಗೃಹರಕ್ಷಕ ದಳದವರು ಹೆಸರುವಾಸಿ ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠ ಡಾ. ಎಚ್.ಪಿ.ಚೇತನ್ ಹೇಳಿದರು.
ಪಟ್ಟಣದ ಗೃಹರಕ್ಷಕ ದಳದ ಕಚೇರಿಯಲ್ಲಿ ರಾಜ್ಯ ಗೃಹರಕ್ಷಕ ದಳದ ಘಟಕದಿಂದ ಆಯೋಜಿಸಿದ್ದ ಗೃಹರಕ್ಷಕ ದಳ ದಿನಾಚರಣೆ, ಅತ್ಯುತ್ತಮ ಸೇವೆ ಸಲ್ಲಿಸಿದ ಹಾಗೂ ನಿವೃತ್ತ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವೆ ಮಾಡುವವರಿಗೆ ತಾವು ಮಾಡುವ ವೃತ್ತಿಯಲ್ಲಿ ಯಾವುದೇ ರೀತಿಯ ಕೀಳರಿಮೆ ಇರಬಾರದು. ನಮ್ಮ ವೃತ್ತಿಯನ್ನು ಗೌರವದಿಂದ ಕಾಣಬೇಕು. ವೃತ್ತಿಯಲ್ಲಿ ಬದ್ಧತೆ, ಹಂಬಲ ಇರಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ವಾರದ ಕವಾಯತು ನಡೆಯುವಾಗ ಸ್ವಚ್ಛತಾ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ.ಭಟ್ ಮಾತನಾಡಿ, ಎರಡನೇ ಮಹಾಯುದ್ಧದ ಕಾಲದಲ್ಲಿ ಗಾಯಾಳುಗಳನ್ನು ರಕ್ಷಿಸಲು ಗೃಹರಕ್ಷಕ ದಳದವರನ್ನು ಸೇವೆಗಾಗಿ ಬಳಸಿಕೊಳ್ಳಲಾಯಿತು. ಶಾಂತಿ, ಶಿಸ್ತು, ಸಹಕಾರಕ್ಕೆ ಗೃಹರಕ್ಷಕ ದಳ ಸೇವೆ ಅಪಾರ ಎಂದರು.
ವೈದ್ಯ ಡಾ. ಎಂ.ಕೆ.ಭಟ್, ಡಾ. ಸೈಯದ್ ಹಾಷಂ, ನಿವೃತ್ತ ಸಿಬ್ಬಂದಿ ಶೇಷಪ್ಪ ಹಾಗೂ ಸಿ.ಆರ್.ದುರ್ಗಪ್ಪ ಅವರನ್ನು ಸನ್ಮಾನಿಸಲಾಯಿತು. ಸಬ್ ಇನ್‌ಸ್ಪೆಕ್ಟರ್ ನವೀನ್, ಗೃಹರಕ್ಷಕ ದಳದ ಉಪ ಸಮಾದೇಷ್ಠ ಎಸ್.ಹಾಲಪ್ಪ, ತಾಲೂಕು ಘಟಕಾಧಿಕಾರಿ ಎಚ್.ಎಂ.ಪ್ರಶಾಂತ್ ಹುಣವಳ್ಳಿ, ನಿವೃತ್ತ ಘಟಕಾಧಿಕಾರಿ ರೇವಣಪ್ಪ, ಬಸವಣ್ಣಪ್ಪ ಪಾಟೀಲ್, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸಮಾಜ ಸೇವಕ ನಾಗರಾಜ್ ಗುತ್ತಿ, ಕೃಷ್ಣ ಇತರರಿದ್ದರು.