ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಮಹಾವೀರ ಜಯಂತಿಯನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಎಚ್.ಉಮೇಶ್, ವಿ.ಟಿ.ಸ್ವಾಮಿ, ಜಯರಾಂ ಬಿ. ಪಾಂಡಿ ಇತರರಿದ್ದರು.
- ವರ್ಧಮಾನರ ಜೀವನ ಮೌಲ್ಯಗಳು ಮಾದರಿ
- ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣನೆ
- ಜಿಲ್ಲೆಯ ವಿವಿಧೆಡೆ ತೀರ್ಥಂಕರರ ಜಯಂತಿ
ಶಿವಮೊಗ್ಗ: ತ್ಯಾಗಕ್ಕೆ ಅನ್ವರ್ಥರಾಗಿದ್ದ ಭಗವಾನ್ ಮಹಾವೀರ (mahaveera) ರು ಅಹಿಂಸೆ ಮತ್ತು ಸತ್ಯ(truth)ದ ಮಾರ್ಗವನ್ನು ಜಗತ್ತಿಗೆ ಸಾರಿದ ಮಹಾನ್ ಜ್ಞಾನಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ (channabasappa)ಹೇಳಿದರು.
ಜಿಲ್ಲಾಡಳಿತ, ಜೈನ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಮಹಾವೀರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಜನಾಗಿದ್ದ ವ್ಯಕ್ತಿ, ತ್ಯಾಗಮಯಿಯಾಗಿ ಜೀವನದ ಪರಮೋಚ್ಚ ಮೌಲ್ಯಗಳನ್ನು ಸಮಾಜಕ್ಕೆ ನೀಡಿದರು. 24ನೇ ತೀರ್ಥಂಕರರಾಗಿ ಜೀವನಮೌಲ್ಯಗಳು, ವಿಚಾರಗಳನ್ನು ಧಾರೆ ಎರೆದಿದ್ದಾರೆ ಎಂದು ಸ್ಮರಿಸಿದರು.
ಉಪನ್ಯಾಸ ನೀಡಿದ ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು ಇವರ ಮೂಲ ಹೆಸರು ವರ್ಧಮಾನ. ಅವರ ಸಂದೇಶಗಳನ್ನು ಮೆಲುಕು ಹಾಕುವ ದಿನ ಇದಾಗಿದೆ. ಅವರ ಬಗ್ಗೆ ಮಾತನಾಡುತ್ತ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕಲ್ಯಾಣ ಕಾರ್ಯವಾಗಬೇಕಿದೆ ಎಂದರು.
ಭಗವಾನ್ ಮಹಾವೀರರು ಕರ್ಮ ಸಿದ್ಧಾಂತಗಳನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಬದುಕನ್ನು ಶಾಂತ ಮತ್ತು ಸುಂದರಗೊಳಿಸುವ ವಿಚಾರಧಾರೆಗಳನ್ನು ನೀಡಿದ್ದಾರೆ. ನಾವು ಮುಂದಿನ ಪೀಳಿಗೆಗೆ ಮಹಾವೀರರ ಅಹಿಂಸಾ ತತ್ವ, ತ್ಯಾಗ, ಸತ್ಯ ಮತ್ತಿತರ ವಿಚಾರಗಳನ್ನು ಧಾರೆ ಎರೆಯಬೇಕಿದೆ ಎಂದು ತಿಳಿಸಿದರು.
ಪ್ರಸ್ತುತ ಜೈನ ಸಮಾಜದವರ ಜನಸಂಖ್ಯೆ ಕಡಿಮೆಯಿದೆ. ಆದರೆ ಜೈನರು ವ್ಯಾಪಾರ, ಉದ್ಯೋಗದ ಮೂಲಕ ಬಹಳಷ್ಟು ಕೊಡುಗೆ ನೀಡಿದ್ದಾರೆ. ಶೇ. 32.5ರಷ್ಟು ಆರ್ಥಿಕ ಬೆಂಬಲವನ್ನು ದೇಶಕ್ಕೆ ನೀಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಮಹಾವೀರರ ಬಗ್ಗೆ ತಿಳಿಸಬೇಕಿದೆ ಎಂದರು.
ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷರಾದ ಜಯರಾಜ ಬಿ. ಪಾಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.
30ನೇ ವಯಸ್ಸಿನಲ್ಲಿ ಸಂಸಾರ ಸುಖವನ್ನು ತ್ಯಜಿಸಿ ಸನ್ಯಾಸಿಯಾದ ಮಹಾವೀರರು, 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ನಂತರ ಅವರಿಗೆ ಪರಿಪೂರ್ಣ ಜ್ಞಾನ ಪ್ರಾಪ್ತಿಯಾಯಿತು. ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಈ ಪಂಚ ಮಹಾವ್ರತಗಳನ್ನು ಅನುಸರಿಸುವ ಮೂಲಕ ಮನುಕುಲಕ್ಕೆ ಮಾದರಿಯಾಗಿದ್ದಾರೆ.