ಸೊರಬ ತಾಪಂ ಸಂಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಜಯಶೀಲಗೌಡ, ಪ್ರಭಾಕರ್ ಕಿಗ್ಗಾ, ಆರ್.ಶಶಿಧರ್ ಇದ್ದರು.
ಸೊರಬ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನಡೆಸುತ್ತಿದ್ದು, ಅವುಗಳನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ. ಫಲಾನುಭವಿಗಳು ಭಯಪಡುವ ಅಗತ್ಯವಿಲ್ಲ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ ಅಂಕರವಳ್ಳಿ ಹೇಳಿದರು.
ಪಟ್ಟಣದ ತಾಪಂ ಸಂಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 1,066 ಮೃತರ ಖಾತೆಗೆ 2,49,72,000 ರೂ. ಹಣ ಜಮೆಯಾಗಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸುವರು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ತಾಲೂಕಿನಲ್ಲಿ ಈಗಾಗಲೇ 378.21 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ 50,600 ಲಾನುಭವಿಗಳು ಇದ್ದು, ಕೆಲವರು ವಾಣಿಜ್ಯ ಉದ್ದಿಮೆಗಳಿಗೆ ಬಳಸಿಕೊಂಡು ಉಚಿತ ವಿದ್ಯುತ್ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮರು ಅರ್ಜಿ ಬಗ್ಗೆ ಪ್ರಸ್ತಾಪ ಆಗಿದ್ದು, ಸರ್ಕಾರದ ಅದೇಶ ಬಂದ ಬಳಿಕ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದರು.
ಗ್ಯಾರಂಟಿ ಯೋಜನೆ ಮುಂದುವರಿಯಲಿದ್ದು, ಜನರು ಅತಂಕ ಪಡಬೇಕಿಲ್ಲ. ಯುವನಿಧಿ ಬಗ್ಗೆ ಜುಲೈ ಮೊದಲ ವಾರ ಆನವಟ್ಟಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕಿನ ಸರ್ಕಾರಿ ಬಸ್ ವ್ಯವಸ್ಥೆ ಬಗ್ಗೆ ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ನಂತರ ಹಿರಿಯ ಅಧಿಕಾರಿಗಳನ್ನು ಸಭೆಗೆ ಮತ್ತೊಮ್ಮೆ ಕರೆಸಬೇಕು ಎಂದು ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಪ್ರಭಾಕರ್ ಶಿಗ್ಗಾ, ತಾಪಂ ಇಒ ಆರ್.ಶಶಿಧರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.