- ಯೋಜನೆಗೆ ನಮ್ಮ ವಿರೋಧ
- ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿಕೆ
ಶಿವಮೊಗ್ಗ: ಸಾಗರ ತಾಲೂಕು ಬೇಸೂರಿ (besuru) ನಲ್ಲಿ ಅಣು (atomic) ವಿದ್ಯುತ್ ಸ್ಥಾವರ ಸ್ಥಾಪನೆಯಾಗುವುದಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಆದರೆ ಈ ಭರವಸೆ ನೀಡಬೇಕಾದುದು ರಾಜ್ಯ ಸರ್ಕಾರ. ಸ್ಥಳೀಯ ಶಾಸಕರು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹರತಾಳು (haratalu) ಹಾಲಪ್ಪ ದೂರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಬಾರದು, ಆಗಲು ಬಿಡುವುದೂ ಇಲ್ಲ. ಈ ವಿಷಯದಲ್ಲಿ ಸರ್ಕಾರ ಅಧಿಕೃತವಾಗಿ ನಿರ್ಧಾರ ಪ್ರಕಟಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ವಿರೋಧವಿದೆ. 78ರಿಂದ 100 ಎಕರೆ ಭೂಮಿ ಮಾತ್ರ ಬಳಕೆಯಾಗುತ್ತದೆ ಎನ್ನುವ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಶುದ್ಧ ಸುಳ್ಳು. ಅಭಯಾರಣ್ಯದಲ್ಲಿ ಯೋಜನೆ ಮುಗಿಯುವ ಹೊತ್ತಿಗೆ 21 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಖರ್ಚಾಗುತ್ತದೆ. ಪರಿಸರದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆ ಪ್ರದೇಶವೇ ಮುಚ್ಚಿ ಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ 8 ಸಾವಿರಕ್ಕೂ ಅಧಿಕ ಮರಗಳು ಬಲಿಯಾಗುತ್ತವೆ. ಹೆದ್ದಾರಿ ನಿರ್ಮಾಣವಾದರೆ ಮರಗಳ ಕಡಿತಲೆ ಆಗುವುದಿಲ್ಲವೇ ಎಂಬ ಬೇಳೂರು ಹೇಳಿಕೆ ಅಸಂಬದ್ಧ. ವಿದ್ಯುತ್ ಉತ್ಪಾದನೆಗೆ ಪಯಾರ್ಯ ಮಾರ್ಗವಿದೆ. ಆದರೆ ಹೆದ್ದಾರಿಗೆ ಬದಲಿ ವ್ಯವಸ್ಥೆಗಳಿಲ್ಲ. ಶಾಸಕರಿಗೆ ಇದರ ಅರಿವು ಇದ್ದಂತಿಲ್ಲ ಎಂದು ಟೀಕಿಸಿದರು.
ಮಲೆನಾಡಿನಲ್ಲಿ ಬರಗಾಲ ಬಂದಿದೆ. ಅನೇಕ ಕಡೆ ಗುಡ್ಡಗಳು ಕುಸಿಯುತ್ತಿವೆ. ಪರಿಸರ ನಾಶವಾಗಿದೆ. ಪಂಪ್ಡ್ ಸ್ಟೋರೇಜ್‌ಗೆ ಆಯ್ಕೆ ಮಾಡಿರುವ ಪ್ರದೇಶ ಸಿಂಗಳೀಕ ಅಭಯಾರಣ್ಯ. ಈ ಯೋಜನೆಗೆ ಅನುಮತಿ ನೀಡಲು ಸಾಧ್ಯವೇ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಇದರ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಚಿವರಾಗದಿದ್ದರೆ ಪ್ರೇತವಾಗುತ್ತಾರೆ!
ಸಾಗರ ಕ್ಷೇತ್ರದ ಶಾಸಕರು ಮೂರು ಬಾರಿ ಶಾಸಕರಾಗಿದ್ದಾರೆ. ಅವರು ಸಚಿವರಾಗಬೇಕೆಂದು ಆಶಿಸುತ್ತೇನೆ. ನಾನು, ಆರಗ ಜ್ಞಾನೇಂದ್ರ, ಮಧು ಹಾಗೂ ಕುಮಾರ್ ಬಂಗಾರಪ್ಪ ಸಚಿವರಾಗಿದ್ದೇವೆ. ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ. ಒಂದು ವೇಳೆ ಅವರು ಸಚಿವರಾಗದಿದ್ದರೆ ಪ್ರೇತವಾಗಿ ಕಾಡುತ್ತಾರೆ. ಈಗಲೇ ಎಸ್ಕಾರ್ಟ್, ಸೈರನ್ ಬಗ್ಗೆ ಅವರು ಆಸಕ್ತಿ ತೋರುತ್ತಿದ್ದಾರೆ. ಸಚಿವರಾದರೆ ಅವರ ಆಸೆ ಈಡೇರುತ್ತದೆ. ಇಲ್ಲವಾದಲ್ಲಿ ರಾತ್ರಿ ಮಲಗಲೂ ಬಿಡುವುದಿಲ್ಲ ಎಂದು ಹರತಾಳು ಹಾಲಪ್ಪ ಲೇವಡಿ ಮಾಡಿದರು.
"
ಮಧುಸೂದನ್ ನಾಯ್ಕ ನೇತೃತ್ವದ ಸಮಿತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ನೀಡಿದ್ದು, ಅದರ ಬಗ್ಗೆ ಸರ್ಕಾರ ಮೌನವಹಿಸಿದೆ. ವರದಿಯ ಅಧ್ಯಯನ ಮಾಡಿ, ರಾಜ್ಯದ ಜನತೆಗೆ ತಿಳಿಸಲು ಬಿಜೆಪಿ ವಿಶೇಷ ಸಮಿತಿ ಮಾಡಲಿದೆ. ಈ ಸಮಿತಿ ಮೂಲಕ ವಾಸ್ತವಾಂಶವನ್ನು ಜನರಿಗೆ ತಿಳಿಸಲಾಗುವುದು. ಕೋಟ್ಯಂತರ ರೂ. ಖರ್ಚು ಮಾಡಿ ವರದಿ ಸಿದ್ಧಪಡಿಸಿದ ಬಳಿಕ ಅದನ್ನು ಮುಚ್ಚಿಡುವುದು ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತೆ.
— ಹರತಾಳು ಹಾಲಪ್ಪ, ಮಾಜಿ ಸಚಿವ