ಸಾಗರ: ಕನ್ನಡ ಭಾಷೆ ಗಡಿ ಮೀರಿ ಬೆಳೆದಿದೆ. ಕನ್ನಡಿಗರು ಜಗತ್ತಿನ 20ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವ ಬೆಳೆಸಿಕೊಂಡು ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ ಎಂದು ಸಾಗರ ಉಪವಿಭಾಗಾಧಿಕಾರಿ ವೀರೇಶಕುಮಾರ್ಹೇಳಿದರು.
ನಗರದ ನೆಹರು ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರಿ.ಶ. 450ರಲ್ಲಿ ದೊರೆತ ಹಲ್ಮಿಡಿ ಶಾಸನಕ್ಕೂ ಪೂರ್ವದಲ್ಲಿ ಕನ್ನಡ ಭಾಷೆ ಇತ್ತು ಎನ್ನುವುದಕ್ಕೆ ಅನೇಕ ದಾಖಲೆಗಳು ಲಭ್ಯವಾಗಿದೆ. ಕದಂಬರಿಂದ ಹಿಡಿದು ಮೈಸೂರು ಅರಸರವರೆಗೂ ಕನ್ನಡ ನಾಡಲ್ಲಿ ಹೆಮ್ಮೆಪಡುವಂತೆ ರಾಜ್ಯಾಡಳಿತ ನಡೆಸಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಗಳಲ್ಲಿ ಒಂದು ಎಂದು ಬಣ್ಣಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮತನಾಡಿ, ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕವಾಗಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡಿಗರಾಗಿ ಕನ್ನಡ ಭಾಷೆ ಬಗ್ಗೆ ನಿಷ್ಕಾಳಜಿ ಎಂದಿಗೂ ಸಲ್ಲದು ಎಂದು ಹೇಳಿದರು.
ಆರಕ್ಷಕ, ಗೃಹರಕ್ಷಕ, ಎನ್ಸಿಸಿ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು. ತಹಸೀಲ್ದಾರ್ ಡಾ. ಆರ್.ಪ್ರತಿಭಾ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಡಿವೈಎಸ್ಪಿ ಡಾ. ಬೆನಕಪ್ರಸಾದ್, ಬಿಇಒ ಸದಾನಂದ ಸ್ವಾಮಿ, ರಮೇಶ್, ವಿ.ಟಿ.ಸ್ವಾಮಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇತರರಿದ್ದರು.