ಸಂಪಿಗೆಹಳ್ಳದಲ್ಲಿ ಆನೆಗಳ ಸಂಚಾರದಿಂದ ನೆಲಕ್ಕುರುಳಿದ ಭತ್ತದ ಪೈರು. 
ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರದಲ್ಲಿ ಆನೆ ನಡೆದಿದ್ದೇ ದಾರಿ!

ಅರವಿಂದ ಅಕ್ಲಾಪುರ ಶಿವಮೊಗ್ಗ
ಮೂರು ವರ್ಷಗಳಿಂದ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಆನೆಗಳ ಹಾವಳಿ ಮಿತಿ ಮೀರಿದೆ. ಶಿವಮೊಗ್ಗ, ಹೊಸನಗರ ಹಾಗೂ ಸಾಗರ ತಾಲೂಕಿನ ಗಡಿ ಪ್ರದೇಶ ಆನೆಗಳ ಕಾರಿಡಾರ್ ಆಗಿ ಪರಿಣಮಿಸಿದೆ. ಕೆಲ ತಿಂಗಳು ಸುಮ್ಮನಿರುವ ಆನೆಗಳು ಒಮ್ಮೆಲೆ ಈ ಭಾಗದಲ್ಲಿ ಸಂಚಾರ ಆರಂಭಿಸುತ್ತಿವೆ.
ಆನೆ ನಡೆದಿದ್ದೇ ದಾರಿ ಎಂಬಂತೆ ಮಾರ್ಗದಲ್ಲಿ ಸಿಗುವ ಅಡಕೆ, ಬಾಳೆ, ಭತ್ತ, ಕಬ್ಬು, ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡುತ್ತಿವೆ. ಹಗಲು ವೇಳೆ ಕಾಡಿನಲ್ಲಿ ಉಳಿದುಕೊಳ್ಳುವ ಆನೆಗಳು ರಾತ್ರಿಯಾಗುತ್ತಿದ್ದಂತೆ ಉಪಟಳ ಮುಂದುವರಿಸುತ್ತಿವೆ. ಒಂದೇ ಪ್ರದೇಶದಲ್ಲಿ ನಿಲ್ಲದೆ ಸದಾ ಸಂಚರಿಸುತ್ತಿವೆ.
ಬೆಳಗ್ಗೆ ಕೃಷಿ ಭೂಮಿಗೆ ತೆರಳುವ ರೈತರು ಆನೆ ದಾಳಿಯಿಂದ ಹಾನಿಗೀಡಾದ ಬೆಳೆ ಕಂಡು ಸಂಕಟಪಡುತ್ತಿದ್ದಾರೆ. ಹಿಂದಿನ ದಿನ ಸರಿಯಾಗಿದ್ದ ತೋಟ, ಗದ್ದೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆಕಾರವನ್ನೇ ಕಳೆದುಕೊಳ್ಳುತ್ತಿವೆ. ಆನೆಗಳು ಯಾವ ಭಾಗದಲ್ಲಿ ಸಂಚರಿಸುತ್ತವೆಯೋ ಆ ಭಾಗದ ರೈತರು ಆತಂಕದಲ್ಲೇ ದಿನದೂಡುವಂತಾಗಿದೆ.
ಇನ್ನು ಕೆಲ ದಿನಗಳಲ್ಲೇ ಭತ್ತದ ಕಟಾವು ಆರಂಭವಾಗಲಿದೆ. ಭತ್ತ ಬೆಳೆದು ನಿಂತಿದೆ. ಈ ಹಂತದಲ್ಲಿ ಆನೆಗಳು ಗದ್ದೆಯಲ್ಲಿ ಸಂಚರಿಸಿದರೆ ಇಡೀ ವರ್ಷದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆನೆಗಳನ್ನು ಬೆದರಿಸಿ ಬೇರೆಡೆಗೆ ಓಡಿಸಲು ಪಟಾಕಿ ಸಿಡಿಸುವುದನ್ನು ಬಿಟ್ಟು ಬೇರ‌್ಯಾವುದೇ ಮಾರ್ಗ ಕಾಣದೆ ರೈತರು ಕಂಗೆಟ್ಟಿದ್ದಾರೆ. ಹಾಗಾಗಿ ಆನೆ ದಾಳಿ ತಪ್ಪಿಸಲು ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟ ರೂಪಿಸಲು ಶೀಘ್ರ ಸಭೆ ನಡೆಸಲು ಈ ಪ್ರದೇಶದ ಪ್ರಮುಖರು ತೀರ್ಮಾನಿಸಿದ್ದಾರೆ.
"

ಆನೆಗಳ ಕಾಟ ಹೆಚ್ಚುತ್ತಿದೆ. ನಾಲ್ಕೈದು ಆನೆಗಳು ದನಗಳ ರೀತಿ ಓಡಾಡುತ್ತಿವೆ. ಲಕ್ಷಾಂತರ ರೂ. ಮೌಲ್ಯದ ಫಸಲು ನಾಶವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ರಾಜಕಾರಣಿಗಳು ರೈತರ ಅಳಲು ಕೇಳುತ್ತಿಲ್ಲ. ಆನೆಗಳ ಸ್ಥಳಾಂತರಕ್ಕೆ ಮೊದಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ದಾರಿ ಅನಿವಾರ್ಯ.

ದಿವಾಕರ್ರೈತ, ಬೆಳ್ಳೂರು

ಯಾವ್ಯಾವ ಗ್ರಾಮಗಳಲ್ಲಿ ಕಾಟ?
ಶಿವಮೊಗ್ಗ ತಾಲೂಕಿನ ಪುರದಾಳು, ಮೇಲಿನ ಪುರದಾಳು, ಬೇಳೂರು, ಕೌಲಾಪುರ, ಆಲದೇವರ ಹೊಸೂರು, ಸಿರಿಗೆರೆ, ಕೂಡಿ, ಎರೆಬೀಸು, ಮಂಜರಿಕೊಪ್ಪ, ಮಲೇಶಂಕರ, ತಮ್ಮಡಿಹಳ್ಳಿ, ಸಂಪಿಗೆಹಳ್ಳ, ಕಲ್ಲುಕೊಪ್ಪ, ಚಿಲುಮೆಜಿಡ್ಡು, ಅಡ್ಡೇರಿ, ಹೊಸನಗರ ತಾಲೂಕಿನ ಬೆಳ್ಳೂರು, ಮತ್ತಿಕೊಪ್ಪ ಭಾಗದಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ಮೂಗುಡ್ತಿ, ಆನಂದಪುರ, ತುಪ್ಪೂರು, ಸೂಡೂರು ಭಾಗದಲ್ಲೂ ಆನೆಗಳು ಸಂಚರಿಸಿದ್ದವು.
ಬ್ಯಾಟರಿ ಬೆಳಕಿಗೆ ಓಟ
ಈ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳು ಕಾಡನೆಯೋ ಅಥವಾ ಸಕ್ರೆಬೈಲು ಬಿಡಾರದ ಪಳಗಿದ ಆನೆಗಳೋ ಎಂಬ ಜಿಜ್ಞಾಸೆಯೂ ಇದೆ. ರಾತ್ರಿ ವೇಳೆ ರೈತರು ಬ್ಯಾಟರಿ ಹಾಕಿದರೆ ಈ ಆನೆಗಳು ಹೆದರಿ ಓಡಿಹೋಗುತ್ತಿವೆ. ಹೀಗಾಗಿ ಇದು ಬಿಡಾರದಲ್ಲಿ ಸಾಕಿರುವ ಆನೆಗಳು ಎಂಬುದು ಕೆಲ ರೈತರ ತರ್ಕ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ವಾದ ತಳ್ಳಿ ಹಾಕುತ್ತಿದ್ದಾರೆ. ಸಾಕಿದ ಆನೆಗಳನ್ನು ಗ್ರಾಮಗಳತ್ತ ಬಿಟ್ಟು ಅರಣ್ಯ ಇಲಾಖೆ ಸಿಬ್ಬಂದಿ ತಮಾಷೆ ನೋಡುತ್ತಿದ್ದಾರೆ ಎಂಬುದು ಕೆಲವರ ಆಕ್ರೋಶ. ಒಟ್ಟಾರೆ ಇದು ವನ್ಯಜೀವಿ-ಮಾನವ ಸಂಘರ್ಷ ಮಾತ್ರವಲ್ಲ, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂ ಸಂಘರ್ಷಕ್ಕೆ ಕಾರಣವಾಗುತ್ತಿದೆ.
"

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಆನೆಗಳ ಹಾವಳಿ ಮಿತಿ ಮೀರಿದೆ. ರಾತ್ರಿ ವೇಳೆ ಕೃಷಿ ಭೂಮಿ ಮೇಲೆ ದಾಳಿ ನಡೆಸಿ ಬೆಳೆ ಹಾಳು ಮಾಡುತ್ತಿವೆ. ಆನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರಂತರವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದೇನೆ. ಈ ಸಮಸ್ಯೆ ಪರಿಹಾರಕ್ಕೆ ಸುಲಭವಾದ ಯಾವುದೇ ಪರ್ಯಾಯ ಮಾರ್ಗಗಳು ಕಾಣುತ್ತಿಲ್ಲ. ಶಾರದಾ ಪೂರ್ಯಾನಾಯ್ಕ್ ಶಿವಮೊಗ್ಗ ಗ್ರಾಮಾಂತರ ಶಾಸಕಿ

ವಾಟ್ಸ್‌ಆ್ಯಪ್ ಗ್ರೂಪ್

ಆನೆ ಸಂಚರಿಸುವ ಭಾಗದ ಜನರನ್ನು ಸೇರಿಸಿ ಆನೆಗಳನ್ನು ಸ್ಥಳಾಂತರಿಸಿ ರೈತರನ್ನ ಉಳಿಸಿ, ರೈತ ಹೋರಾಟ ಸಮಿತಿ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಇದರಲ್ಲಿ 400 ಜನರು ಇದ್ದಾರೆ. ಆನೆಗಳ ಚಲನವಲನ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ. ಆನೆ ಯಾವ ಗ್ರಾಮದಲ್ಲಿದೆ, ಯಾವ ಗ್ರಾಮದತ್ತ ತೆರಳುತ್ತಿದ್ದೆ ಎಂಬುದನ್ನು ತಿಳಿಸಲಾಗುತ್ತದೆ. ಇದರಿಂದ ತಕ್ಕ ಮಟ್ಟಿಗೆ ಆನೆಗಳನ್ನು ನಿರಂತರವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಿಸಲು ಸಾಧ್ಯವಾಗುತ್ತಿದೆ. ಆನೆಗಳ ಕಾಟ ತಪ್ಪಿಸಲು ಅರಣ್ಯ ಇಲಾಖೆ ಮನಸ್ಸು ಮಾಡುತ್ತಿಲ್ಲ. ಇದಕ್ಕಾಗಿ ಹೋರಾಟ ಮಾಡೋಣ ಎಂದರೆ ಜನಪ್ರತಿನಿಧಿಗಳು, ರೈತ ಮುಖಂಡರು ಸ್ಪಂದಿಸುತ್ತಿಲ್ಲ. ಇಲ್ಲಿನ ರೈತ ನಾಯಕರು ಬೇರೆ ಜಿಲ್ಲೆಗಳ ರೈತರ ಸಮಸ್ಯೆಗೆ ಬೀದಿಗಿಳಿದು ಪ್ರತಿಭಟಿಸುತ್ತಾರೆ. ನಮ್ಮ ಗೋಳಿಗೆ ದನಿಯಾಗುತ್ತಿಲ್ಲ ಎಂದು ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.