ಶಿವಮೊಗ್ಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ಮಾತನಾಡಿದರು. ಮಂಜುಳಾ, ಲೋಕೇಶ, ಸುನೀತಾ, ಕಾಶಿನಾಥ ಇದ್ದರು.
- ಜಂಟಿ ಕೃಷಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ಅಭಿಮತ
- ಸಿರಿಧಾನ್ಯಗಳ ಅಡುಗೆ ಪ್ರದರ್ಶನ, ಸ್ಪರ್ಧೆ
- ಮನಸೂರೆಗೊಂಡ ವಿವಿಧ ತಿಂಡಿ ತಿನಿಸು
ಶಿವಮೊಗ್ಗ: ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ (food) ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ನಮ್ಮ ಪೂರ್ವಿಕರು ತಯಾರಿಸುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯ (health) ಕರವಾಗಿದ್ದವು. ಈಗ ಹಿಂದಿನ ಕಾಲದ ಆಹಾರ ಪದ್ಧತಿ (system) ಯನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ಹೇಳಿದರು.
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ ಇಲಾಖೆಯಿಂದ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ತೀರಾ ಕಡಿಮೆ. ಆದರೆ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಸಿರಿಧಾನ್ಯದ ವಿವಿಧ ರೀತಿಯ ಖಾದ್ಯಗಳ ತಯಾರಿಕೆ, ಬಳಕೆ ಮಾಡಲಾದ ಸಿರಿಧಾನ್ಯಗಳ ವಿವರ ಸೇರಿ ಖಾದ್ಯಗಳ ಸಂಪೂರ್ಣ ವಿವರಗಳೊಂದಿಗೆ ಸ್ಪರ್ಧಾಳುಗಳು ಉತ್ತಮವಾಗಿ ಖಾದ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದರು.
ಮಲೆನಾಡು ಭಾಗದಲ್ಲಿ ತಯಾರಿಸುವ ಬಾಣಂತಿಯರ ಖಾದ್ಯಗಳು ಎಲ್ಲರ ಗಮನ ಸೆಳೆದಿವೆ. ಜೋಳದ ಗುಗ್ಗರಿ, ನವಣೆ ಖಿಲ್ಸ, ಸಜ್ಜೆ ಮಾದಲಿ, ಸುಕ್ಕಿನುಂಡೆ, ಕಡುಬುಗಳು, ಗಾರ್ಗೆಯಂತಹ ಅನೇಕ ಮರೆತು ಹೋದ ಖಾದ್ಯಗಳನ್ನು ಸ್ಪರ್ಧಾಳುಗಳು ವಿಶೇಷವಾಗಿ ತಯಾರಿಸಿದ್ದಾರೆ. ಮರೆತು ಹೋದ ಖಾದ್ಯ, ಸಿರಿಧಾನ್ಯ ಸಿಹಿ ಮತ್ತು ಖಾರ ಮೂರು ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನಕ್ಕೆ ಐದು, ದ್ವಿತೀಯ ಮೂರು ಹಾಗೂ ತೃತೀಯ ಸ್ಥಾನ ಪಡೆದವರಿಗೆ ಎರಡು ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸಿರಿಧಾನ್ಯದ ಸಿಹಿ ಮಂಡಿಗೆ, ಹುರುಳಿ ಉಂಡೆ, ಸಾಮೆ ಅಡೆ ಪಾಯಸ, ಹುರುಳಿ ಲೇಹ್ಯಗಳು, ನವಣೆ ಕಡಬು, ಸಿರಿಧಾನ್ಯಗಳ ಮಫಿನ್, ಕೇಕ್ ಬಿಸ್ಕತ್ತು, ನವಣೆ ತೊಡೆದೇವು, ಸಿರಿಧಾನ್ಯ ಮಿಠಾಯಿಗಳು, ಕರಡಿಸೊಪ್ಪಿನ ಚಟ್ನಿ, ಬಾಳೆ ಮೂತಿ ಖಾರ(ಬಾಣಂತಿಯರಿಗೆ), ಪೊಂಗಲ್, ಪರೋಟ, ಕಡುಬು, ಗಾರ್ಗೆ, ನವಧಾನ್ಯ ಮುದ್ದೆ, ಸಿರಿಧಾನ್ಯ ಬರ್ಫಿ, ಮಾಲದಿ, ಸಿರಿಧಾನ್ಯ ಹೋಳಿಗೆ, ಉಂಡೆಗಳನ್ನು ತಯಾರಿಸಿ ವೈವಿಧ್ಯಮಯವಾಗಿ ಅಲಂಕಾರಗೊಳಿಸಿ ಪ್ರದರ್ಶಿಸಲಾಗಿತ್ತು.
ಕೃಷಿ ಇಲಾಖೆ ಉಪನಿರ್ದೇಶಕಿ ಮಂಜುಳಾ , ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ, ಸುನೀತಾ, ಲೋಕೇಶ್ ಇತರರಿದ್ದರು.
ಸಿರಿಧಾನ್ಯ ಸಿಹಿ: 1. ಎನ್.ಅನಿತಾ, ಶಿವಮೊಗ್ಗ. 2.ಕೆ.ಎಂ.ಸತೀಶ ಕುಮಾರ್, ಭದ್ರಾವತಿ. 3. ಶ್ರುತಿ, ಭದ್ರಾವತಿ.
ಸಿರಿಧಾನ್ಯ ಖಾರ: 1.ಗಂಗಾ ಕುಬಸಪ್ರಭು, ಭದ್ರಾವತಿ. 2. ಶಾಲಿನಿ, ತೀರ್ಥಹಳ್ಳಿ. 3. ಮಾಲತಿ ಶರ್ಮಾ, ಸಾಗರ.
ಮರೆತುಹೋದ ಖಾದ್ಯ: 1.ಎಚ್.ವಿ.ಆಶಾ, ತೀರ್ಥಹಳ್ಳಿ. 2. ಎಚ್.ಇ.ಗೀತಾ, ಶಿವಮೊಗ್ಗ. 3.ಎಂ.ಎನ್.ಸುಶೀಲಾ, ಭದ್ರಾವತಿ.
ಸಿರಿಧಾನ್ಯಗಳಲ್ಲಿ ಉತ್ತಮ ಕಾರ್ಬೋಹೈಡ್ರೇಟ್, ನಾರು, ಪ್ರೊಟೀನ್ ಮತ್ತು ಖನಿಜಾಂಶಗಳಿವೆ. ವಿಶೇಷವಾಗಿ ಮಧುಮೇಹ ಇರುವವರಿಗೆ ಒಳ್ಳೆಯ ಆಹಾರ. ಸಿರಿಧಾನ್ಯಗಳಿಗೆ ಉತ್ತೇಜನ ನೀಡುವುದರೊಂದಿಗೆ ಇದರ ಮೌಲ್ಯವರ್ಧನೆ ಸಹ ಅಷ್ಟೇ ಮುಖ್ಯ. ಆದ್ದರಿಂದ ಪ್ರತಿ ವರ್ಷ ಸಿರಿಧಾನ್ಯ ಖಾದ್ಯ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ.