ರಘು ಕೌಟಿಲ್ಯ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ
- ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಅಭಿಪ್ರಾಯ
- ಸಿದ್ದರಾಮಯ್ಯ ನಡೆಗೆ ಸುದ್ದಿಗೋಷ್ಠಿಯಲ್ಲಿ ಟೀಕೆ
ಶಿವಮೊಗ್ಗ : ಸಿದ್ದರಾಮಯ್ಯ (siddaramaiaha) ಎರಡು ಬಾರಿ ಸಿಎಂ ಆದರೂ ಹಿಂದುಳಿದ (backward) ವರ್ಗಗಳಿಗೆ ನ್ಯಾಯ ಕಲ್ಪಿಸಲೇ ಇಲ್ಲ. ಮಾತಿನಲ್ಲಿ ತೋರಿದ ಶೂರತ್ವ ಕೃತಿಯಲ್ಲಿ ಕಾಣಲೇ ಇಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಗಳನ್ನು ಅವರು ಅನುಷ್ಠಾನಗೊಳಿಸಲಿಲ್ಲ. ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬಿಜೆಪಿ (bjp) ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಅಭಿಪ್ರಾಯಪಟ್ಟರು.
ಅಹಿಂದ ನಾಯಕ ಎಂದು ತಮ್ಮನ್ನು ಕರೆದುಕೊಳ್ಳುವ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರನ್ನು ಅಲ್ಪಸಂಖ್ಯಾತ ನಾಯಕ ಎನ್ನಲು ಅಡ್ಡಿಯಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಬದ್ಧತೆಯ ರಾಜಕಾರಣದ ಕೊರತೆಯಿದೆ. ಹಿಂದುಳಿದವರ ಸ್ಥಿತಿಗತಿಯ ಸಮೀಕ್ಷೆಗಾಗಿ ಇದುವರೆಗೆ 600 ಕೋಟಿ ರೂ. ವ್ಯಯವಾಗಿದೆ. ತೆರಿಗೆ ಹಣ ಖರ್ಚಾಗಿದ್ದು ಬಿಟ್ಟರೆ ಜನರಿಗೆ ಯಾವುದೇ ಅನುಕೂಲವಾಗಲಿಲ್ಲ. ಒಬಿಸಿ ಸಮುದಾಯಗಳ ಅಶೋತ್ತರಗಳಿಗೆ ಕಿಮ್ಮತ್ತು ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2014ರಲ್ಲಿ ಕಾಂತರಾಜ ನೇತೃತ್ವದಲ್ಲಿ ಆಯೋಗಕ್ಕೆ ಜಾತಿ ಜನಗಣತಿ ಜವಾಬ್ದಾರಿ ಕೊಡಲಾಯಿತು. ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿದ್ದ ಹಿಂದುಳಿದ ವರ್ಗಗಳ ಆಯೋಗಕ್ಕೆ ಅದನ್ನು ವಹಿಸಲಾಯಿತು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಜನಗಣತಿಯ ವರದಿ ಮೂಲೆ ಸೇರಿತು. ಬಿಹಾರದಲ್ಲಿ ನಿತೀಶ್ ಕುಮಾರ್, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಒಂದು ವರ್ಷದ ಕಾಲಮಿತಿಯಲ್ಲಿ ಮುಗಿಸಿದ ಕೆಲಸವನ್ನು, ಸಿದ್ದರಾಮಯ್ಯನವರು 10 ವರ್ಷಗಳ ಅವಧಿಯಲ್ಲೂ ಮಾಡಲಿಲ್ಲ ಎಂದು ದೂರಿದರು.
ಕಳೆದ ವರ್ಷ ಸಿದ್ದರಾಮಯ್ಯ ಮತ್ತೊಂದು ಜಾತಿಗಣತಿಗೆ ಮುಂದಾದರು. 2025ರ ಜೂನ್ 15ರಂದು ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಘೋಷಿಸಿದರು. ತಂತ್ರಜ್ಞಾನ ಬಳಸಿ ಮೂರು ತಿಂಗಳಲ್ಲಿ ವರದಿ ಸಿದ್ಧವಾಗುತ್ತದೆ ಎಂದು ಆಗ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇನ್ನೂ ಆ ಪ್ರಕ್ರಿಯೆ ಮುಕ್ತಾಯವಾಗಿಲ್ಲ ಎಂದು ತಿಳಿಸಿದರು.
ಈಗ ಸಿಎಂ ಡಿ.ಕೆ.ಶಿವಕುಮಾರ್ ತಕ್ಷಣವೇ ಮಧುಸೂದನ್ ಆರ್.ನಾಯ್ಕ ನೇತೃತ್ವದ ವರದಿಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದ ಹಿಂದುಳಿದ ವರ್ಗಗಳ ಸಮುದಾಯಗಳು ಒಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಪ್ರಮುಖರಾದ ಮಾಲತೇಶ್, ಪೂರ್ಣಿಮಾ ಪ್ರಕಾಶ್, ಶ್ಯಾಮಲಾ ಎಸ್.ಕುಂದರ್, ಹರಿಕೃಷ್ಣ, ಸುನೀತಾ ಅಣ್ಣಪ್ಪ, ಲಕ್ಕಪ್ಪ, ಎಸ್.ಚಂದ್ರಶೇಖರ್, ಸುಧಾಕರ್, ಪ್ರಭಾಕರ್, ಮಮತಾ ರೆಡ್ಡಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡಿದೆಯೇ? ಎಂದು ಪ್ರಶ್ನಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಹಿಂದ ಎಂಬುದು ಎಲ್ಲಿ ನೋಂದಣಿಯಾಗಿದೆ ಎಂಬ ಪ್ರಶ್ನೆಗೆ ಮೊದಲು ಉತ್ತರ ನೀಡಲಿ. ಅಹಿಂದ ಎಂಬುದು ಕಾಂಗ್ರೆಸ್‌ನವರು ರಾಜಕಾರಣದ ಉಪಯೋಗಕ್ಕೆ ಮಾಡಿಕೊಂಡಿರುವ ಒಂದು ಸೂತ್ರವಷ್ಟೆ. ಮಾತಿನಲ್ಲಿ ಅಹಿಂದ ಎಂದ ಮಾತ್ರಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ರಘು ಕೌಟಿಲ್ಯ ತಿಳಿಸಿದರು.