ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಬದುಕು ಹಾಗೂ ವಿಚಾರ ಧಾರೆಗಳ ಕುರಿತ ಉಪನ್ಯಾಸವನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಡಾ. ಗೋವಿಂದ, ಡಾ. ಸಿ.ರೇಣುಕಾರಾಧ್ಯ ಇತರರಿದ್ದರು.
- ಡಾ. ಬಿ.ಆರ್.ಅಂಬೇಡ್ಕರ್ ಬದುಕು ಹಾಗೂ ವಿಚಾರ ಧಾರೆಗಳ ಕುರಿತ ಉಪನ್ಯಾಸ
- ಮಾದರಿ ಸಂವಿಧಾನವನ್ನು ನೀಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು
- ಬೆಕ್ಕಿನ ಕಲ್ಮಠದ ಶ್ರೀ ಗುರುಬಸವ ಭವನದಲ್ಲ್ಲಿಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ: ಬಾಬಾ ಸಾಹೇಬ್ ಅಂಬೇಡ್ಕರ್(Ambedkar)ಅವರು ರಚಿಸಿದ ಸಂವಿಧಾನ(Constitution) ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಬೆಕ್ಕಿನ ಕಲ್ಮಠದ ಶ್ರೀ ಗುರುಬಸವ ಭವನದಲ್ಲಿ ಶುಕ್ರವಾರ ಕರ್ನಾಟಕ ಸಂಸ್ಕೃತ ವಿದ್ಯಾಲಯ, ಬೆಂಗಳೂರಿನ ಡಾ. ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಬೆಕ್ಕಿನ ಕಲ್ಮಠದ ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬದುಕು ಹಾಗೂ ವಿಚಾರ ಧಾರೆಗಳ ಕುರಿತು ವಿಶೇಷ ಉಪನ್ಯಾಸ(Special lecture) ನೀಡಿದರು.
ಮಾದರಿ ಸಂವಿಧಾನ(Model Constitution)ವನ್ನು ನೀಡುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದು, ಸಮಾಜ ಪರಿವರ್ತನೆ ಹಾಗೂ ಅಸ್ಪಶ್ಯತೆ ಹೋಗಲಾಡಿಸಲು ಇಡೀ ಜೀವನ ಮುಡಿಪಿಟ್ಟರು. ಹಿಂದೂ ಧರ್ಮದಲ್ಲಿನ ಅಸಮಾನತೆ ವಿರುದ್ಧ ಧ್ವನಿ ಎತ್ತಿದರು. ಜೀವನದ ಸಂಧ್ಯಾಕಾಲದಲ್ಲಿ ಇದೇ ಸಂಸ್ಕೃತಿಯಲ್ಲಿ ಹುಟ್ಟಿದ ಬೌದ್ಧ ಧರ್ಮಕ್ಕೆ ಸೇರಿದರು ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಸಿ.ರೇಣುಕಾರಾಧ್ಯ ಮಾತನಾಡಿ, ಬೆಕ್ಕಿನ ಕಲ್ಮಠದಲ್ಲಿ 1983ರಿಂದ ಸಂಸ್ಕೃತ ಪಾಠ ಶಾಲೆ ಆರಂಭಿಸಿದ್ದು, ಸಂಸ್ಕೃತ ಕಲಿಕೆಯ ಪ್ರಮುಖ ಕೇಂದ್ರವಾಗಿ ಬೆಳೆಸಲಾಗಿದೆ ಎಂದು ತಿಳಿಸಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಕೃತ ವಿವಿ ಪ್ರಸಾರಾಂಗ ಸಂಯೋಜನಾಧಿಕಾರಿ ಡಾ. ಗೋವಿಂದ, ಸಮಾಜ ಕಲ್ಯಾಣ ಇಲಾಖೆ ನಿಲಯ ಮೇಲ್ವಿಚಾರಣಾಧಿಕಾರಿ ಬಿ.ಎಸ್.ವಿನಯಾ, ಡಯಟ್ ನಿವೃತ್ತ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ, ಉಪನ್ಯಾಸಕ ಚಂದ್ರಶೇಖರಯ್ಯ, ಲೋಕೇಶಪ್ಪ, ಸಿ.ವಿ.ಶಾಂತವೀರಪ್ಪ, ವ್ಯೋಮಕೇಶಾರಾಧ್ಯ, ಡಾ. ಕಾವ್ಯಾ ಉಪಸ್ಥಿತರಿದ್ದರು.
ಸಮಾಜ ಒಗ್ಗೂಡಿಸುವ ಚಿಂತನೆ
ಸಂಸ್ಕೃತ ಮೃತ ಭಾಷೆಯಲ್ಲ. ಅದು ಅಮೃತ ಭಾಷೆ. ಇಡೀ ಸಮಾಜವನ್ನು ಒಂದು ಮಾಡುವ ಚಿಂತನೆ ಸಂಸ್ಕೃತದಲ್ಲಿದೆ. ಎಲ್ಲರೂ ಒಂದು ಹಾಗೂ ಸುಖವಾಗಿ ಇರಬೇಕು ಎಂಬ ಮೂಲ ತತ್ವ ಹೊಂದಿದೆ. ಜೀವನದಲ್ಲಿ ಸಂಸ್ಕೃತ ವಿದ್ವತ್ ಅಳವಡಿಸಿಕೊಂಡರೆ ಜ್ಞಾನಿಯಾಗುತ್ತಾನೆ. ಇಂದು ವಿಶ್ವದ ಅನೇಕ ದೇಶಗಳಲ್ಲಿ ಸಂಸ್ಕೃತ ಭಾಷೆ ಪ್ರಾಮುಖ್ಯ ಅರಿತು ಮಕ್ಕಳಿಗೆ ಸಂಸ್ಕೃತ ಕಲಿಸಲಾಗುತ್ತಿದೆ. ಸಂಸ್ಕೃತ ಭಾಷೆಯ ಕೊಡುಗೆ ಅಪಾರ. ಅದರ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.