ಶಿಕಾರಿಪುರದಲ್ಲಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಛಲವಾದಿ ಸಮಾಜದಿಂದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಮಾಲತೇಶ್ ಸರ್ಕಾರ್, ಕೇಶವ್, ಸುನಂದಾ ಮಂಜುನಾಥ್, ರಾಜ್‌ಕುಮಾರ್, ಮಂಜುಳಾ ಭಜಂತ್ರಿ, ಇತರರಿದ್ದರು.
ಶಿಕಾರಿಪುರ: ಈ ನಾಡು ಕಂಡ ಅಪ್ರತಿಮ ಸಾಹಸಿ ಒನಕೆ ಓಬವ್ವ. ಇತಿಹಾಸದ ಪುಟಗಳಲ್ಲಿ ಆಕೆಯ ಸಾಹಸಗಾಥೆ ದಾಖಲಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಛಲವಾದಿ ಸಮಾಜದಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓಬವ್ವ ತನ್ನ ನೆಲವನ್ನು ಸಂರಕ್ಷಿಸಲು ಮುಂದಾದ ವೀರ ಮಹಿಳೆ. ಆಕೆಯ ತ್ಯಾಗ, ಬಲಿದಾನ ನಮಗೆ ನಿತ್ಯಸ್ಫೂರ್ತಿ ಎಂದರು.
ಛಲವಾದಿ ಸಮಾಜ ಅತ್ಯಂತ ಪರಿಶ್ರಮಿ ಮತ್ತು ಸ್ವಾಭಿಮಾನಿ ಸಮಾಜ. ಬಹುತೇಕ ಕೃಷಿಯಲ್ಲಿ ತೊಡಗಿಕೊಂಡಿರುವ ಈ ಸಮಾಜ ಅತ್ಯಂತ ಹಿಂದುಳಿದಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಇನ್ನಷ್ಟು ಪ್ರಬಲವಾಗಬೇಕಾದ ಅಗತ್ಯವಿದೆ. ಮಕ್ಕಳ ಶಿಕ್ಷಣದ ಬಗ್ಗೆ ಮೊದಲ ಆದ್ಯತೆ ನೀಡಿ ಎಂದು ಹೇಳಿದರು.
ಭಾರತ ದೇಶದ ಅತಿ ದೊಡ್ಡ ಶಕ್ತಿ ಎಂದರೆ ಅದು ನಾರಿ ಶಕ್ತಿ. ಇಂದು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ರಾಷ್ಟ್ರದ ಮೊದಲ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು. ಕೆಳದಿ ಚನ್ನಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ಮತ್ತು ಮಹಾ ಶರಣೆ ಅಕ್ಕಮಹಾದೇವಿ ಸೇರಿ ನೂರಾರು ಯಶಸ್ವಿ ಮಹಿಳೆಯರು ನಮಗೆ ಮಾದರಿ ಎಂದರು.
ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಮಾಲತೇಶ್ ಸರ್ಕಾರ್, ಗೌರವಾಧ್ಯಕ್ಷ ಕೇಶವ್, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ವೀರ ರಾಣಿ ಓಬವ್ವ ಆಚರಣಾ ಸಮಿತಿ ಅಧ್ಯಕ್ಷ ಆರ್.ರಾಜ್‌ಕುಮಾರ್, ತಹಸೀಲ್ದಾರ್ ಮಂಜುಳಾ ಭಜಂತ್ರಿ, ಇಒ ಎನ್.ಜಿ.ನಾಗರಾಜ್, ಡಿವೈಎಸ್‌ಪಿ ಕೇಶವ್ ಮತ್ತಿತರರಿದ್ದರು.