ಚಿಟ್ಟೇಬೈಲು ಪ್ರಜ್ಞಾಭಾರತಿ ಪ್ರೌಢಶಾಲೆಗೆ ಕೊಠಡಿಗಳನ್ನು ನಿರ್ಮಿಸಿಕೊಟ್ಟಿರುವ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಪಟ್ಟಾಭಿರಾಮ್, ಹೆದ್ದೂರು ನವೀನ್, ದಿನೇಶ್ ಇತರರಿದ್ದರು.
ತೀರ್ಥಹಳ್ಳಿ: ಸಮಾಜದ ಹಿತದೃಷ್ಟಿ ಹಿನ್ನೆಲೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರ ಬದುಕು ಅತ್ಯಂತ ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ದರಲಗೋಡು ಕುಟುಂಬ ಮತ್ತು ಓಂಕಾರಂ ಪ್ರತಿಷ್ಠಾನದಿಂದ ಪಟ್ಟಣ ಸಮೀಪದ ಚಿಟ್ಟೇಬೈಲು ಪ್ರಜ್ಞಾಭಾರತಿ ಪ್ರೌಢಶಾಲೆಗೆ ನಿರ್ಮಿಸಿಕೊಟ್ಟಿರುವ ಎರಡು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ, ಸಂಸ್ಕಾರಯುತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸೇವಾ ಭಾವನೆಯ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಉಳ್ಳವರ ನೆರವು ಅಗತ್ಯ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಭವಿಷ್ಯದ ಆಶಾಕಿರಣಗಳಾದ ವಿದ್ಯಾರ್ಥಿಗಳು ನಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡದೆ ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಯ ವ್ಯರ್ಥವಾಗದಂತೆ ಗುರಿ ತಲುಪುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಹಿತಕ್ಕಾಗಿ ಚಿಂತಿಸುವವರ ಬದುಕು ಅನುಕರಣೀಯ ಎಂದು ತಿಳಿಸಿದರು.
ಪಟ್ಟಾಭಿರಾಮ್, ಹೆದ್ದೂರು ನವೀನ್, ದಿನೇಶ್ ಭಾರತಿಪುರ, ಉಷಾ ಜೋಯ್ಸ, ವೆಂಕಟೇಶ್, ಜಯಶೀಲ, ಮೇಳಿಗೆ ಶಿವಸ್ವಾಮಿ, ಶಿಕ್ಷಕಿ ಮಧು ಇದ್ದರು.