ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಹದ ಸಮಾರೋಪ ಸಮಾರಂಭವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು. ವಾಟಗೋಡು ಸುರೇಶ್, ಎಚ್.ಎನ್.ವಿದ್ಯಾಧರ, ಜಿ.ಎನ್.ಸುಧೀರ್, ಮಧುಸೂದನ, ಕೃಷ್ಣಮೂರ್ತಿ, ಧರ್ಮೇಂದ್ರ ಇತರರದ್ದರು.
ರಿಪ್ಪನ್‌ಪೇಟೆ: ದೇಶದಲ್ಲಿ 8.50 ಲಕ್ಷ ಸಹಕಾರ ಸಂಘಗಳಿವೆ. 40 ಕೋಟಿ ಸದಸ್ಯರನ್ನು ಹೊಂದಿವೆ. 5 ಟ್ರಿಲಿಯನ್ ವಹಿವಾಟು ನಡೆಸುತ್ತಿರುವ ಸಹಕಾರ ಸಂಘಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ, ಸಹಕಾರ ಇಲಾಖೆಯಿಂದ ಆಯೋಜಿಸಿದ್ದ ಸಹಕಾರ ಸಪ್ತಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
120 ವರ್ಷಗಳ ಹಿಂದೆ ಗ್ರಾಮೀಣ ಬದುಕಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ಗದಗದಲ್ಲಿ ಆರಂಭವಾದ ಸಹಕಾರ ಚಳವಳಿ ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜನರ ಚಳವಳಿಯಾದ ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಇದು ಮೂಲ ತತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದರು.
ಮಲೆನಾಡಿನಲ್ಲಿ ಅಡಕೆಗೆ ಹಳದಿ, ತೊಂಡೆ, ಎಲೆಚುಕ್ಕೆ ರೋಗಗಳು ಬಾಧಿಸುತ್ತಿದ್ದು ರೈತರನ್ನು ಹೈರಾಣಾಗಿಸಿವೆ. ನಿರ್ವಹಣಾ ವೆಚ್ಚ ಅಧಿಕವಾಗಿ, ಆದಾಯ ಕಡಿಮೆಯಾಗಿ ಕೃಷಿಕರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಸಹಕಾರ ಸಂಘಗಳು ರೈತರಿಗೆ ಜಾಗೃತಿ ಮೂಡಿಸುವ ಮೂಲಕ ನೈತಿಕ ಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು.
ಸಹಕಾರ ಸಂಘಗಳು ದೇಶದಲ್ಲಿ 7-8 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಿದೆ. ಕೇಂದ್ರ ಸರ್ಕಾರ ನಬಾರ್ಡ್ ಪುನರ್ಧನವನ್ನು ಸಂಪೂರ್ಣ ನಿಲ್ಲಿಸುವ ಆಲೋಚನೆಯಲ್ಲಿದೆ. ಹಾಗಾಗಿ ಗ್ರಾಮೀಣ ಜನರ ಎಲ್ಲ ವಹಿವಾಟುಗಳನ್ನು ಸಂಘಗಳಲ್ಲಿಯೇ ನಿರ್ವಹಿಸುವಂತೆ ಯೋಜನೆ ರೂಪಿಸಿ ಆರ್ಥಿಕ ವಹಿವಾಟಿನಲ್ಲಿ ಸಹಕಾರ ಸಂಘಗಳು ಸ್ವಾವಲಂಬನೆ ಸಾಧಿಸಬೇಕು ಎಂದರು.
ಸಹಕಾರ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್, ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಸುಧೀರ್, ಮಧುಸೂದನ, ಮ್ಯಾಮ್ಕೋಸ್ ನಿರ್ದೇಶಕ ಕೆ ವಿ.ಕೃಷ್ಣಮೂರ್ತಿ, ಧರ್ಮೇಂದ್ರ, ಅಪ್ಕೋಸ್ ನಿರ್ದೇಶಕ ಕಲ್ಯಾಣಪ್ಪ ಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಯರಾಮ್, ಕಲಗೋಡು ರತ್ನಾಕರ, ಶ್ವೇತಾ ಬಂಡಿ, ಸುಮಾ ಸುಬ್ರಹ್ಮಣ್ಯ, ಜಯಶೀಲಪ್ಪ ಗೌಡ ಇತರರಿದ್ದರು.