ಶಿಕಾರಿಪುರದ ಕುಮದ್ವತಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗಣಿತ ಫೋರಂ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಕೆ.ಸಿ.ರವೀಂದ್ರ, ಕೋಟೋಜಿರಾವ್, ಅಭಿಲಾಷ್, ರಮ್ಯಾ ಇತರರಿದ್ದರು.
ಶಿಕಾರಿಪುರ: ಮಕ್ಕಳಿಗೆ ಅರ್ಥವಾಗುವ ರೀತಿ ಬೋಧನೆ ಮಾಡುವುದು ಅವಶ್ಯ ಎಂದು ಕುಮದ್ವತಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಸಿ.ರವೀಂದ್ರ ಹೇಳಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜಿನ ಗಣಿತ ವಿಭಾಗದ ಫೋರಂ ಉದ್ಘಾಟಿಸಿ ಮಾತನಾಡಿ, ದೈನಂದಿನ ಜೀವನದಲ್ಲಿ ಗಣಿತ ಅಗತ್ಯವಿದೆ. ಗಣಿತ ಇಲ್ಲದ ಜಗತ್ತು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬದುಕಿನ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ವಿಷಯದ ಆಸಕ್ತಿ ಬೆಳೆದರೆ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಕೋಟೋಜಿ ರಾವ್ ಮಾತನಾಡಿ, ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಐತಿಹಾಸಿಕವಾದುದು. ಶೂನ್ಯ ಮತ್ತು ದಶಮಾಂಶ ಪದ್ಧತಿ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ ಮತ್ತು ಶ್ರೀನಿವಾಸ ರಾಮಾನುಜನ್ ಅವರಂತಹ ಮಹಾನ್ ಗಣಿತಜ್ಞರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.
ಗಣಿತ ಫೋರಂ ಮುಖ್ಯಸ್ಥ ಅಭಿಲಾಷ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಗಣಿತದ ಭಯ ಹೋಗಲಾಡಿಸಲು ಫೋರಂ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಉಪನ್ಯಾಸಕಿ ಎಚ್.ಆರ್.ರಮ್ಯಾ ಮಾತನಾಡಿ, ಹಣಕಾಸಿನ ನಿರ್ವಹಣೆ, ಸಮಯದ ಮೌಲ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳಿಗೆ ಗಣಿತ ಅವಶ್ಯ ಎಂದು ಹೇಳಿದರು. ಗಣಿತ ವಿಷಯ ಸಂಬಂಧಿಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕರಾದ ಪುಷ್ಪಾವತಿ, ರಕ್ಷಿತಾ, ನಹಿದಾ ಬಾನು, ಕಾವ್ಯಾ, ವಿದ್ಯಾರ್ಥಿಗಳು ಇದ್ದರು.