ಸಾಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 7ನೇ ಇತಿಹಾಸ ಸಮ್ಮೇಳನವನ್ನು ಡಾ. ಅಮರೇಶ್ ಯತಗಲ್ ಅವರು ಹಸ್ತಪ್ರತಿ ಮತ್ತು ಓಲೆಗರಿಗಳನ್ನು ತೆರೆಯುವ ಮೂಲಕ ಉದ್ಘಾಟಿಸಿದರು. ಡಾ. ಕೆಳದಿ ವೆಂಕಟೇಶ್ ಜೋಯ್ಸ, ಡಾ. ಕೆ.ಪ್ರಭಾಕರ ರಾವ್, ಡಾ. ಪ್ರಸನ್ನ, ವಿ.ಟಿ.ಸ್ವಾಮಿ ಇತರರಿದ್ದರು.
- ಹಂಪಿ ವಿವಿಯ ಡಾ. ಅಮರೇಶ್ ಯತಗಲ್ ಅಭಿಮತ
- ಸಾಗರ ತಾಲೂಕು ಮಟ್ಟದ 7ನೇ ಇತಿಹಾಸ ಸಮ್ಮೇಳನ
- ನಾಡಿನ ಕೀರ್ತಿ ಹೆಚ್ಚಿಸಿದ ರಾಣಿ ಚನ್ನಮ್ಮಾಜಿ
ಸಾಗರ: ಮಲೆನಾಡು ಪ್ರಾಂತ್ಯದಲ್ಲಿ ಕೆಳದಿ ರಾಣಿ ಚನ್ನಮ್ಮಾಜಿ, ವೀರಮ್ಮಾಜಿ, ರಾಣಿ ಚನ್ನಬೈರಾದೇವಿ ಅವರು ನಾಡಿನ ಕೀರ್ತಿ ಹೆಚ್ಚಿಸಿದರು ಎಂದು ಹಂಪಿ ವಿಶ್ವವಿದ್ಯಾಲಯ ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ. ಅಮರೇಶ್ ಯತಗಲ್ ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ತಾಲೂಕು ಇತಿಹಾಸ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕೆಳದಿ ರಿಸರ್ಚ್ ಫೌಂಡೇಷನ್ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 7ನೇ ಇತಿಹಾಸ ಸಮ್ಮೇಳನ ಉದ್ಘಾಟಿಸಿ ಭಾರತೀಯ ಚರಿತ್ರೆ ರಚನೆಯಲ್ಲಿ ಸ್ಥಳೀಯ ಇತಿಹಾಸದ ಪಾತ್ರ ಕುರಿತು ಮಾತನಾಡಿದರು.
ಪುರಾತನ ವಸ್ತುಗಳನ್ನು ನಾವು ನಾಶ ಮಾಡುತ್ತಿದ್ದೇವೆ. ನಿಧಿ ಸಿಗುತ್ತದೆ ಎಂದು ದೇವಸ್ಥಾನ, ಈಶ್ವರಲಿಂಗ, ನಾಗಶಿಲ್ಪಗಳನ್ನು ಒಡೆದು ಹುಡುಕುತ್ತಿದ್ದೇವೆ. ವಾಸ್ತವವಾಗಿ ಹಿಂದಿನವರು ಅಲ್ಲಿ ಯಾವುದೇ ಆಭರಣ, ನಗನಾಣ್ಯ ಬಚ್ಚಿಡಲಿಲ್ಲ. ಚರಿತ್ರೆಯ ಅನೇಕ ಸಂಗತಿಗಳನ್ನು ನಾವು ನಾಶ ಮಾಡುತ್ತಿದ್ದೇವೆ. ಸ್ಥಳೀಯ ಇತಿಹಾಸದ ಮಹತ್ವವನ್ನು ನಾವು ಅರಿತುಕೊಳ್ಳಬೇಕು. ಡಾ. ಅಮರೇಶ್ ಯತಗಲ್ಹಂಪಿ ವಿಶ್ವವಿದ್ಯಾಲಯ ಅಧ್ಯಯನಾಂಗ ವಿಭಾಗದ ನಿರ್ದೇಶಕ
ಭಾರತೀಯ ಮಹಿಳೆಯರ ವೀರ ಇತಿಹಾಸದಲ್ಲಿ ರಾಣಿ ಚನ್ನಮ್ಮಾಜಿ, ವೀರಮ್ಮಾಜಿ, ರಾಣಿ ಚನ್ನಾಬೈರಾದೇವಿ, ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕದೇವಿ, ಬೆಳವಾಡಿ ಮಲ್ಲಮ್ಮನಂಥವರನ್ನು ನಮ್ಮ ತಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ರಾಣಿ ಚನ್ನಬೈರಾದೇವಿ ಪೋರ್ಚಗೀಸರು ಮತಾಂತರ ಮಾಡುವುದನ್ನು ತಪ್ಪಿಸಿದರೆ, ಬೆಳವಾಡಿ ಮಲ್ಲಮ್ಮ ಮಹಿಳಾ ಸಂಘಗಳನ್ನು ಸ್ಥಾಪಿಸಿ ಮಹಿಳೆಯರು ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಟ ಮಾಡುವಂತೆ ಪ್ರೇರಪಿಸಿದವರು ಎಂದು ತಿಳಿಸಿದರು.
ಸಾಗರ ತಾಲೂಕಿನಿಂದ ನೆಲ, ಜಲ, ಕಾಡು ರಕ್ಷಣೆ ಸೇರಿ ಹಲವು ಚಳವಳಿಗಳು ನಡೆದಿವೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತೊಮ್ಮೆ ನಮ್ಮನ್ನು ಆಕ್ರಮಿಸುತ್ತಿದೆ. ಈಗ ಮತ್ತೊಮ್ಮೆ ಸಾಗರ ಜಿಲ್ಲೆಯ ಕೂಗು ಕೇಳಿಬರುತ್ತಿದೆ. ಸಾಗರಕ್ಕೆ ಜಿಲ್ಲೆ ಸ್ಥಾನ ಪಡೆಯುವ ಎಲ್ಲ ಅರ್ಹತೆ ಇದೆ. ಆದಷ್ಟು ಬೇಗ ಕಾರ್ಯಗತ ಆಗಬೇಕು. ಡಾ. ಕೆಳದಿ ವೆಂಕಟೇಶ್ ಜೋಯ್ಸಇತಿಹಾಸ ಸಮ್ಮೇಳನಾಧ್ಯಕ್ಷ
ಇತಿಹಾಸ ಸಂಶೋಧನಾ ವಿದ್ಯಾರ್ಥಿ ರವಿಚಂದ್ರ ಮಂಡಗಳಲೆ ಹಸೆಚಿತ್ತಾರ-ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿದರು. ವೇದಿಕೆ ಉಪಾಧ್ಯಕ್ಷ ವಿ.ಟಿ.ಸ್ವಾಮಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಪ್ರಭಾಕರ ರಾವ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಟಿ.ಪ್ರಸನ್ನ, ಪ್ರಮುಖರಾದ ಡಾ. ಶ್ರೀಪಾದ ಹೆಗಡೆ, ಕೆ.ಸಿದ್ದಪ್ಪ, ಉಮೇಶ್ ಹಿರೇನೆಲ್ಲೂರು, ಲಕ್ಷ್ಮಣ್ ಆರ್. ನಾಯ್ಕ, ಆಶಾ ಹೆಗಡೆ, ಆರ್.ಸತೀಶ್, ಡಿ.ಗಣಪತಪ್ಪ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇತರರಿದ್ದರು.