ಇರುವಕ್ಕಿ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಜಯಂತ್ಯುತ್ಸವದಲ್ಲಿ ಡಾ. ಆರ್.ಸಿ.ಜಗದೀಶ್, ಎಸ್.ನಾರಾಯಣ ಮಾವರಕರ್, ಎಚ್.ಎಂ.ಪ್ರಿಯಾಂಕಾ, ಡಾ. ಪ್ರಿಯಾ ಇತರರಿದ್ದರು.
ಆನಂದಪುರ: ನಮ್ಮ ದೇಶಕ್ಕೆ ವಿಶಿಷ್ಟ ಸಂವಿಧಾನ ರೂಪಿಸಿ ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನ ಗೌರವ ತಂದುಕೊಟ್ಟ ಡಾ. ಅಂಬೇಡ್ಕರ್ ಮರೆಯಲಾಗದ ಮಹಾ ವ್ಯಕ್ತಿ ಎಂದು ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.
ವಿವಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಮತ್ತು ಡಾ. ಜಗಜೀವನ ರಾಮ್ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಬೇರೆ ಬೇರೆ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ್ದರು. ಜಾತಿ, ಮತ, ಧರ್ಮ ಮತ್ತು ಭೌಗೋಳಿಕ ಭಿನ್ನತೆ ಹೊಂದಿರುವ ನಮ್ಮ ದೇಶಕ್ಕೆ ಹೊಂದಿಕೆಯಾಗುವ ಸಂವಿಧಾನ ರೂಪಿಸಿದರು. ಅದೇ ರೀತಿ ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಸಹ ಸಮಾನತೆಗಾಗಿ ಶ್ರಮಿಸಿದ ಮಹಾ ಚೇತನ ಎಂದು ಬಣ್ಣಿಸಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ. ಎಸ್.ನಾರಾಯಣ ಮಾವರಕರ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಸಾಧನೆ ಬಗ್ಗೆ ವಿವರಿಸಿದರು. ಜಗಜೀವನ್ ರಾಮ್ ಕೃಷಿ, ರೈಲ್ವೆ, ರಕ್ಷಣೆ, ಆಹಾರ, ಸಾರಿಗೆ ಹಾಗೂ ಕಾರ್ಮಿಕ ಸಚಿವರಾಗಿ ಸಲ್ಲಿಸಿದ ಸೇವೆಯನ್ನು ಶ್ಲಾಸಿದರು.
ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯ್ಕ, ಕುಲಸಚಿವ ಡಾ. ಶಾಮರಾವ್ ಜಹಗೀರದಾರ, ಸಂಶೋಧನಾ ನಿರ್ದೇಶಕ ಡಾ. ಎಸ್.ಶ್ರೀಧರ್, ವಿಸ್ತರಣಾ ನಿರ್ದೇಶಕ ಡಾ. ಕೆ.ರಾಘವೇಂದ್ರ, ಸ್ನಾತಕೋತ್ತರ ಡೀನ್ ಡಾ. ಟಿ.ಕೆ.ನಾಗರತ್ನ, ಉಪನ್ಯಾಸಕರಾದ ಡಾ. ಎಸ್. ಪ್ರದೀಪ್, ಎಚ್.ಎಂ.ಪ್ರಿಯಾಂಕಾ, ಡಾ. ಪ್ರಿಯಾ ಕಿವುಡಸಣ್ಣವರ ಇತರರಿದ್ದರು.