ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ 
ಶಿವಮೊಗ್ಗ

ಹಿರಿಯರು ಕಟ್ಟಿದ ಕಾಂಗ್ರೆಸ್ ಇಂದು ಬೀದಿಗೆ ಬಂದಿದೆ I congress poor situation

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ.
  • ಕಾಂಗ್ರೆಸ್‌ನಲ್ಲಿ ಸ್ವಾರ್ಥವೇ ಹೆಚ್ಚಾಗಿದೆ.
  • ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಶಿವಮೊಗ್ಗ: ಅತಿವೃಷ್ಟಿ, ಅನಾವೃಷ್ಟಿಯಿಂದ ಜನರು ತತ್ತರಿಸಿದ್ದಾರೆ. ಅವರ ಗೋಳು ಕೇಳುವವರೇ ಇಲ್ಲವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಎರಡು ತಿಂಗಳಾದರೂ ಕ್ಯಾಬಿನೆಟ್ (cabinet) ಪೂರ್ಣಗೊಂಡಿಲ್ಲ. ಹಿರಿಯರು ಕಟ್ಟಿದ ಕಾಂಗ್ರೆಸ್ (congress) ಇಂದು ಬೀದಿಗೆ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ (eshwarappa) ವಾಗ್ದಾಳಿ ನಡೆಸಿದರು.
1885ರಲ್ಲಿ ಎಲ್ಲ ರಾಷ್ಟ್ರಭಕ್ತರು ಸೇರಿ ಕಾಂಗ್ರೆಸ್ ಕಟ್ಟಿದ್ದರು. ಇಂದು ಕಾಂಗ್ರೆಸ್ ಅಧಿಕಾರ ದಾಹದಿಂದ ಕೆಳಮಟ್ಟಕ್ಕೆ ಇಳಿದು ಹೀನಾಯ ಸ್ಥಿತಿಗೆ ಬಂದಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸ್ವಾರ್ಥವೇ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅಧಿಕಾರ ಸಿಗದೆ ಕೆಲ ಶಾಸಕರು ಅತೃಪ್ತರಾಗಿದ್ದಾರೆ. ಅವರ ಬೆಂಬಲಿಗರು ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಲ ಶಾಸಕರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಸಚಿವ ಸ್ಥಾನ ಸಿಗದ ಬೇಳೂರು ಗೋಪಾಲಕೃಷ್ಣ ಅವರು ತಮಗೆ ಸಚಿವ ಸ್ಥಾನ ಸಿಗದಿರಲು ರಾಹುಲ್ ಗಾಂಧಿಯೇ ಕಾರಣ ಎಂದಿದ್ದಾರೆ. ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಬರಬಾರದಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸಮಾಧಿಯಾಗಿದೆ ಎಂದು ವ್ಯಂಗ್ಯವಾಡಿದರು.
ಅತೃಪ್ತ ಶಾಸಕರನ್ನು ಶಾಂತಗೊಳಿಸಲು ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಓರ್ವ ಮಹಿಳೆಗೂ ಸಚಿವ ಸ್ಥಾನ ನೀಡದ ಸರ್ಕಾರ ಮಹಿಳೆಯರನ್ನು ವಂಚಿಸಿದೆ. ಗಾಯತ್ರಿ ಶಾಂತೇಗೌಡ ಅವರ ಹೆಸರು ಸಚಿವರ ಪಟ್ಟಿಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಅವರ ಹೆಸರು ಕೈ ಬಿಟ್ಟಿರುವುದು ಕಾಂಗ್ರೆಸ್ ದುಸ್ಥಿತಿಗೆ ನಿದರ್ಶನವಾಗಿದೆ ಎಂದರು.
ಕಾಂಗ್ರೆಸ್‌ನಲ್ಲಿ ಅಶಿಸ್ತು ತುಂಬಿ ಹೋಗಿದೆ. ಸಭಾಪತಿ ಪೀಠಕ್ಕೂ ಅವಮಾನವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕಳಿಸಿದ್ದ ಸಚಿವರ ಪಟ್ಟಿಯಲ್ಲಿ ಸಭಾಪತಿ ಹಾಗೂ ಉಪಸಭಾಪತಿ ಸ್ಥಾನಕ್ಕೂ ಹೆಸರನ್ನು ಸೂಚಿಸಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ರಕ್ಷಣೆಗೆ ಹಲವರ ಬಲಿದಾನವಾಗಿದೆ. ಹಿಂದೂ ರಾಷ್ಟ್ರವಾಗಲ್ಲ ಎಂಬುದು ಅವರ ಭ್ರಮೆ. ಯತೀಂದ್ರ ಏನೇ ಹೇಳಿದರೂ ಭಾರತ ಮುಸ್ಲಿಂ ರಾಷ್ಟ್ರವಾಗುವುದಿಲ್ಲ. ಹಿಂದೂ ರಾಷ್ಟ್ರವೇ ಆಗಿರುತ್ತದೆ ಎಂದು ಕಿಡಿಕಾರಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಕುಬೇಂದ್ರಪ್ಪ, ಶಿವಾಜಿ, ಬಾಲು, ಸೀತಾಲಕ್ಷ್ಮೀ, ಅನಿತಾ, ಕೋಕಿಲಾ, ಮೋಹನ್ ಉಪಸ್ಥಿತರಿದ್ದರು.
"

ನನ್ನನ್ನು ಮರಳಿ ಬಿಜೆಪಿಗೆ ಸೇರಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯಲ್ಲಿರುವ ಗೊಂದಲಗಳು ಸರಿಯಾದರೆ ಮಾತ್ರ ಬಿಜೆಪಿ ಸೇರುತ್ತೇನೆ. ಬಿಜೆಪಿ ನನ್ನ ಮಾತೃ ಪಕ್ಷ. ಆದರೆ ಬಿಜೆಪಿ ಬಿಟ್ಟು ಬೇರೆ ಕಡೆಗೆ ಹೋಗುವುದಿಲ್ಲ. ಕೆಲವು ಬೇಡಿಕೆ ಮುಂದಿಟ್ಟಿದ್ದೇನೆಯೇ ಹೊರತು ಷರತ್ತುಗಳನ್ನಲ್ಲ. ಸಂಘಟನೆ ದೃಷ್ಟಿಯಿಂದ ಬಿಜೆಪಿಯಲ್ಲಿ ಕೆಲವು ಬದಲಾವಣೆಗಳು ಆಗಬೇಕಾಗಿದೆ. ಪಕ್ಷಕ್ಕೆ ಅದು ಒಳ್ಳೆಯದೂ ಹೌದು.

— ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.