ಶಿಕಾರಿಪುರದಲ್ಲಿ ಮನುಕುಲ ಸೇವಾ ಟ್ರಸ್ಟ್‌ನಿಂದ ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಭಾರತ ಮಿಷನ್ 2.0 ಕುರಿತ ತರಬೇತಿಯಲ್ಲಿ ಗೋವಿಂದ, ಭರತ್, ರಾಜಕುಮಾರ್ ಇತರರಿದ್ದರು.
ಶಿಕಾರಿಪುರ: ಪೌರಕಾರ್ಮಿಕರು ಸಮಾಜದ ಸ್ವಾಸ್ಥೃ ಕಾಪಾಡುವ ಸೇನಾನಿಗಳು. ಅವರು ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಬೆಂಗಳೂರಿನ ಮನುಕುಲ ಸೇವಾ ಟ್ರಸ್ಟ್‌ನ ಗೋವಿಂದ ಹೇಳಿದರು.
ಅಧಿಕಾರಿಗಳು, ಸ್ವಚ್ಛತಾ ವಿಭಾಗದ ಕಾರ್ಮಿಕರಿಗೆ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಸ್ವಚ್ಛ ಭಾರತ ಮಿಷನ್ 2.0 ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ನಗರ, ಗ್ರಾಮ, ಪಟ್ಟಣಗಳು ಸ್ವಚ್ಛವಾಗಿರಲು ಪೌರಕಾರ್ಮಿಕರೇ ಮುಖ್ಯ ಕಾರಣ. ಪೌರ ಕಾರ್ಮಿಕರು ನಮ್ಮ ಹೆಮ್ಮೆ ಎಂದರು.
ಶಿವಮೊಗ್ಗ ನಗರಾಭಿವೃದ್ಧಿ ಕೋಶದ ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರು ಕಸ ನಿರ್ವಹಣೆ ಮತ್ತು ವಿಲೇವಾರಿ ಬಗ್ಗೆ ಸರ್ಕಾರ ನೀಡಿದ ಸಲಕರಣೆಗಳನ್ನು ಉಪಯೋಗಿಸಿ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನುತಾ ಮಾತನಾಡಿ, ಪೌರಕಾರ್ಮಿಕರು ಕಾಯಕದ ಜತೆಗೆ ಆರೋಗ್ಯದ ಕಡೆಗೂ ಗಮನಕೊಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಭರತ್, ವ್ಯವಸ್ಥಾಪಕ ರಾಜಕುಮಾರ್, ಸಂಘಟನಾಧಿಕಾರಿ ಸುರೇಶ್, ಆರೋಗ್ಯ ನಿರೀಕ್ಷಕ ನವಾಜ್, ನಾಗಭೂಷಣ್, ಕಂದಾಯ ವಿಭಾಗದ ಸುರೇಶ್ ಇತರರಿದ್ದರು.