ಶಿವಮೊಗ್ಗದಲ್ಲಿ ಕಸ್ತೂರಬಾ ಪದವಿಪೂರ್ವ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರವನ್ನು ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಎಸ್.ಎನ್.ನಾಗರಾಜ್, ಎಸ್.ಎಚ್.ರವಿಕುಮಾರ್, ಸಿ.ತಿಪ್ಪೇಸ್ವಾಮಿ, ಕೆ.ಸುಜನಾ ಇತರರಿದ್ದರು. 
ಶಿವಮೊಗ್ಗ

ಪಠ್ಯಪುಸ್ತಕ ರಚನೆ ರಾಜಕೀಯ ಹಸ್ತಕ್ಷೇಪ ಮುಕ್ತವಾಗಿರಲಿ | Kasturba PU College

ಪ್ರಮುಖ ಮುಖ್ಯಾಂಶಗಳು

  • ಕಸ್ತೂರಬಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಘಗಳ ಉದ್ಘಾಟನೆ
  • ಮೂಲ ಸೌಕರ್ಯ ಕಲ್ಪಿಸದೆ ಶಿಕ್ಷಣ ನೀತಿ ಅನುಷ್ಠಾನ ವ್ಯರ್ಥ
  • ಶಿವಮೊಗ್ಗದಲ್ಲಿ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಅಭಿಮತ
ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮೊದಲು ಆದ್ಯತೆ ನೀಡಬೇಕಿದೆ. ಮೂಲಭೂತ ವ್ಯವಸ್ಥೆಗಳಿಲ್ಲದೆ ಹೊಸ ಶಿಕ್ಷಣ ನೀತಿಗಳನ್ನು ಜಾರಿಗೊಳಿಸಿದರೆ ನಿರೀಕ್ಷಿತ ಫಲಿತಾಂಶ ಅಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ(S.L.Bhojegowda)ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಗುರುವಾರ ಕಸ್ತೂರಬಾ ಪದವಿಪೂರ್ವ ಕಾಲೇಜಿ(Kasturba PU College)ನಿಂದ ವಿವಿಧ ವಿದ್ಯಾರ್ಥಿನಿ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಸರಿಯಾದ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ, ನಂತರ ಯಾವುದೇ ಶಿಕ್ಷಣ ನೀತಿಯನ್ನು ಸರ್ಕಾರ ಅಳವಡಿಸಲಿ ಎಂದು ಸಲಹೆ ನೀಡಿದರು.
ಗುಣಮಟ್ಟದ ಶಿಕ್ಷಣ(Quality education) ಪ್ರಮುಖ ಆದ್ಯತೆಯಾಗಬೇಕು. ವಾಸ್ತವಾಂಶಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಮನೋಭಾವ ಬೆಳೆಸುವ ಬದಲು ಹೇಳಿದ್ದನ್ನೇ ಸತ್ಯವೆಂದು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಯುತ್ತಿರುವುದು ಕಳವಳಕಾರಿ. ಪಠ್ಯಪುಸ್ತಕ ರಚನೆ ರಾಜಕೀಯ ಹಸ್ತಕ್ಷೇಪ(Political interference)ದಿಂದ ಮುಕ್ತವಾಗಿರಬೇಕು. ವೈಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು, ಭಾಷಾ ಪ್ರಾವೀಣ್ಯ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವಂತಹ ಪಠ್ಯಪುಸ್ತಕ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ಸಂಸ್ಥೆಯ ಹಲವು ಅನುದಾನಿತ ವಿದ್ಯಾಸಂಸ್ಥೆ(Aided Institution)ಗಳಲ್ಲಿ ಸರ್ಕಾರದಿಂದ ನೇಮಕಗೊಳ್ಳಬೇಕಾದ ಬೋಧಕರ ಕೊರತೆಯಿದ್ದರೂ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆ ಆಗದಂತೆ ಆಡಳಿತ ಮಂಡಳಿಯೇ ಹೆಚ್ಚುವರಿ ಬೋಧಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡಲು ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಯುಗ(Information technology era)ದಲ್ಲಿ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುವ ಅವಕಾಶವಿದೆ. ಆದರೆ ಮಾಹಿತಿಯನ್ನು ವಿವೇಚನೆಯೊಂದಿಗೆ ಅರ್ಥೈಸಿ, ಆಧುನಿಕ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಎಚ್.ರವಿಕುಮಾರ್, ಪ್ರೌಢಶಾಲೆ ಉಪ ಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಕೆ.ಸುಜನಾ, ಉಪಾಧ್ಯಕ್ಷರಾದ ಯಶಸ್ವಿನಿ, ಚೇತನಕುಮಾರಿ, ಸೀಮಾ ಬಾನು ಉಪಸ್ಥಿತರಿದ್ದರು.

ಗಣ್ಯರಿಗೆ ವಿಭಿನ್ನ ಸ್ವಾಗತ

ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುವ ಉದ್ದೇಶದಿಂದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿನಿಯರು ಕುವೆಂಪು ರಂಗಮಂದಿರದ ಪ್ರವೇಶ ದ್ವಾರದಲ್ಲಿ ಅತಿಥಿಗಳನ್ನು ಆಯಾ ರಾಜ್ಯಗಳ ಭಾಷೆಗಳಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಕೊಡಗು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಪಂಜಾಬ್, ಆಗ್ರಾ ಹಾಗೂ ಬಂಜಾರ ಸಂಸ್ಕೃತಿ(Banjara culture)ಯ ಉಡುಗೆ ತೊಟ್ಟ ವಿದ್ಯಾರ್ಥಿನಿಯರು ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯ ಅನನ್ಯ ಚಿತ್ರಣ ಮೂಡಿಸಿದರು. ಇದೇ ವೇಳೆ ನಿವೃತ್ತ ಇತಿಹಾಸ ಉಪನ್ಯಾಸಕ ಎಚ್.ವಿ.ಶುಭಕರ್ ದಂಪತಿಯನ್ನು ಸನ್ಮಾನಿಸಲಾಯಿತು.