ಜಮೀನಿನ ಖಾತೆ ಮಾಡಿಕೊಡದ ತಹಸೀಲ್ದಾರ್ ಕ್ರಮ ಖಂಡಿಸಿ ಮರವೇರಿದ್ದ ರೈತ ನಾಗರಾಜ್. 
ಶಿವಮೊಗ್ಗ

ಜಮೀನಿನ ಖಾತೆ ಮಾಡಿಕೊಡದ ತಹಸೀಲ್ದಾರ್, ಮರವೇರಿದ ರೈತ Demand for bribe

ಶಿವಮೊಗ್ಗ: ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದರೂ ಖಾತೆ ಮಾಡಿಕೊಡದ ಶಿವಮೊಗ್ಗ ತಹಸೀಲ್ದಾರ್ ಕ್ರಮ ಖಂಡಿಸಿ ರಾಮೇನಕೊಪ್ಪದ ರೈತರೊಬ್ಬರು ಬುಧವಾರ ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರಿನ ಆಲದ ಮರವೇರಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದರೂ ಖಾತೆ ಮಾಡಿಕೊಡದ ಶಿವಮೊಗ್ಗ ತಹಸೀಲ್ದಾರ್ ಕ್ರಮ ಖಂಡಿಸಿ ರಾಮೇನಕೊಪ್ಪದ ರೈತರೊಬ್ಬರು ಬುಧವಾರ ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರಿನ ಆಲದ ಮರವೇರಿ ಪ್ರತಿಭಟನೆ ನಡೆಸಿದರು.

ತಾಲೂಕಿನ ರಾಮೇನಕೊಪ್ಪದ ನಾಗರಾಜ್ ಮರವೇರಿದ ರೈತ. ಜಮೀನಿನ ಖಾತೆ ಮಾಡಿಕೊಡಲು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸತಾಯಿಸುತ್ತಿದ್ದಾರೆ. 25 ವರ್ಷಕ್ಕಿಂತ ಹೆಚ್ಚು ಕಾಲದಿಂದ 28 ಕುಟುಂಬಗಳು ತಲಾ 4 ಎಕರೆಯಂತೆ ರಾಮೇನಕೊಪ್ಪದಲ್ಲಿ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದು, 11 ರೈತರನ್ನು ಬಿಟ್ಟು ಉಳಿದವರಿಗೆ ಸರ್ಕಾರದಿಂದ ಜಾಗ ಮಂಜೂರಾಗಿದೆ ಎಂದರು.

ಶಿವಮೊಗ್ಗ ಉಪವಿಭಾಗಾಧಿಕಾರಿ 11 ರೈತರಿಗೆ ಮಂಜೂರಾತಿ ರದ್ದುಪಡಿಸಿದ್ದು, ಆದೇಶದ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ರೈತರು ಪ್ರಶ್ನಿಸಿದ್ದರು. ರೈತರ ಅರ್ಜಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪುರಸ್ಕರಿಸಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿದ್ದ ಆದೇಶ ತಿರಸ್ಕರಿಸಿದ್ದರು. ಪ್ರಕರಣ ಸಂಬಂಧ ಹಿತಾಸಕ್ತರಿಂದ ದಾಖಲಾತಿ ಪಡೆದು ಪರಿಶೀಲಿಸಿ ಕ್ರಮ ವಹಿಸುವಂತೆ ಶಿವಮೊಗ್ಗ ತಹಸೀಲ್ದಾರ್ ಗೆ ನಿರ್ದೇಶನ ನೀಡಿ ಆದೇಶಿಸಿದ್ದರು. ಆದರೆ ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತರಿಗೆ ಜಮೀನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ರೈತ ಆರೋಪಿಸಿದರು.

ಕಳೆದ ಹಲವು ತಿಂಗಳುಗಳಿಂದ ಕಚೇರಿಗೆ ಅಲೆದಾಡಿದರೂ ಕೆಲಸವಾಗಿರಲಿಲ್ಲ. ಈ ನಡುವೆ ಲಕ್ಷಾಂತರ ರೂ. ಲಂಚ ನೀಡಿದ್ದರೂ ಕೆಲಸ ಆಗಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ತಹಸೀಲ್ದಾರ್ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ತಿಳಿದ ರೈತರು ಬೆಳಗ್ಗೆ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರೈತ ನಾಗರಾಜ್ ಮರವೇರಿ ಪ್ರತಿಭಟಿಸಿದರು. ಜಮೀನಿಗೆ ಖಾತೆ ಮಾಡಿಕೊಡುವವರೆಗೂ ಕೆಳಕ್ಕಿಳಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು. ಅಹವಾಲು ಆಲಿಸಬೇಕು. ಬಲವಂತವಾಗಿ ಮರದಿಂದ ಕೆಳಕ್ಕಿಳಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ಜಿಲ್ಲಾಧಿಕಾರಿ ಇಲ್ಲದ ಕಾರಣ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್.ಮೈತ್ರಿ ಸ್ಥಳಕ್ಕೆ ಬಂದು ಮರವೇರಿದ್ದ ರೈತನ ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಆತ ಕೆಳಗೆ ಇಳಿಯಲಿಲ್ಲ. ಇದೇ ವೇಳೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ರೈತನೊಂದಿಗೆ ಬಂದಿದ್ದವರನ್ನು ಕಚೇರಿಗೆ ಮಾತುಕತೆಗೆ ಕರೆದೊಯ್ದರು. ಮಧ್ಯಾಹ್ನ 2ರವರೆಗೂ ಹೈಡ್ರಾಮಾ ಮುಂದುವರಿದಿತ್ತು. ಸತತ ನಾಲ್ಕು ಗಂಟೆ ಬಳಿಕ ಸ್ಥಳದಲ್ಲಿ ಸಾರ್ವಜನಿಕರು, ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಸೇರಿ ರೈತ ನಾಗರಾಜ್ ಮನವೊಲಿಸಿ ಕೆಳಗಿಳಿಸಿದರು.

25 ಲಕ್ಷ ರೂ. ನೀಡಿದ್ದ ಆರೋಪ

ಖಾತೆ ಮಾಡಿಸಿಕೊಡುವುದಾಗಿ ಹೇಳಿ ತಮ್ಮಿಂದ ಶಿವಮೊಗ್ಗ ತಹಸೀಲ್ದಾರ್ 25 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ರಾಮೇನಕೊಪ್ಪದ ರೈತ ನಾಗರಾಜ್ ಗಂಭೀರ ಆರೋಪ ಮಾಡಿದರು. ಮರದಿಂದ ಕೆಳಗಿಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಮಾಡಿಸಿಕೊಡುವ ವಿಚಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಸತಾಯಿಸುತ್ತಿದ್ದಾರೆ. ಖಾತೆ ಲಾಗಿನ್ ಮಾಡುವುದು ಹಾಗೂ ಕಡತ ಮುಂದಕ್ಕೆ ಕಳುಹಿಸುವ ವಿಚಾರದಲ್ಲಿ ನಾಟಕ ಆಡುತ್ತಿದ್ದಾರೆ. ಪದೇಪದೆ ನೋಟಿಸ್ ನೀಡಿ ಹಣ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ ಎಂದು ದೂರಿದರು. ವರ್ಗಾವಣೆಯಾಗಿರುವ ತಹಸೀಲ್ದಾರ್ ವಿರುದ್ಧವೂ ನಾಗರಾಜ್ ಗಂಭೀರ ಆರೋಪ ಮಾಡಿದ್ದು, ಡಿಸಿ, ಎಡಿಸಿ ಹೆಸರು ಹೇಳಿಕೊಂಡು ಹಣ ಪಡೆಯಲಾಗಿದೆ ಎಂದು ಆರೋಪಿಸಿದರು. ತಹಸೀಲ್ದಾರ್ ಕಚೇರಿಯಲ್ಲೇ ಹಣಕ್ಕೆ ಬೇಡಿಕೆ ಇಡಲಾಗಿತ್ತು. ನನ್ನೊಬ್ಬನಿಂದಲೇ 25 ಲಕ್ಷ ರೂ. ಪಡೆಯಲಾಗಿದೆ ಎಂದಿದ್ದಾರೆ.