ಕುವೆಂಪು ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಎಸ್.ಎನ್.ಚನ್ನಬಸಪ್ಪ, ಬಲ್ಕಿಷ್ ಬಾನು, ಸಿ.ಎಸ್.ಚಂದ್ರಭೂಪಾಲ್, ಸಿ.ಎಸ್.ಷಡಾಕ್ಷರಿ, ಪ್ರಭುಲಿಂಗ ಕವಳಿಕಟ್ಟಿ, ಎನ್.ಹೇಮಂತ್, ನಿ.ನಿಖಿಲ್, ಎಸ್.ಆರ್.ಮಂಜುನಾಥ ಇದ್ದರು.
- ಕುವೆಂಪು ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ
- ಮಕ್ಕಳ ಮನಸ್ಥಿತಿ ಅರಿತು ಆತ್ಮಸ್ಥೈರ್ಯ ತುಂಬುವ ಕೆಲಸ ಶಿಕ್ಷಕರಿಂದ ಸಾಧ್ಯ
- ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣನೆ
ಶಿವಮೊಗ್ಗ: ಮಕ್ಕಳಿಗೆ ಅರಿವಿನ ಬೆಳಕು ಮತ್ತು ಜ್ಞಾನವನ್ನು ಕೊಡುವ ದೀವಿಗೆ ಶಿಕ್ಷಕರು. ಮಕ್ಕಳ ಮನಸ್ಥಿತಿ ಅರಿತು ಆತ್ಮಸ್ಥೈರ್ಯ ತುಂಬುವ, ಭವಿಷ್ಯ ರೂಪಿಸುವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (B.Y.Raghavendra) ಬಣ್ಣಿಸಿದರು.
ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ(Teachers' Day) ಉದ್ಘಾಟಿಸಿ ಮಾತನಾಡಿದ ಅವರು, ಮನೆ ಮತ್ತು ಸಮಾಜ ಎರಡನ್ನೂ ನೋಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ನಾಳಿನ ಸತ್ಪ್ರಜೆಗಳನ್ನು ಮತ್ತು ನಾಯಕರನ್ನು ರೂಪಿಸುವ ಶಿಲ್ಪಿಗಳು ಶಿಕ್ಷಕರು. ಆಧುನಿಕ ತಂತ್ರಜ್ಞಾನ(Modern technology), ಎಐ ಯುಗ(AI era)ದಲ್ಲಿ ಮಕ್ಕಳಿಗೆ ಕೂತಲ್ಲೇ ಅನೇಕ ಮಾಹಿತಿ, ವಿಚಾರಗಳು ಲಭಿಸುತ್ತಿವೆ. ಆದರೆ ನಿಜವಾದ ಜ್ಞಾನ, ಅಂತಃಶಕ್ತಿ, ಪ್ರಾಯೋಗಿಕ ಜ್ಞಾನ ಶಿಕ್ಷಕರಿಂದ ಮಾತ್ರ ಸಿಗಲು ಸಾಧ್ಯವಿದ್ದು, ಬಲಿಷ್ಠ, ಸುಸಂಸ್ಕೃತ ಮತ್ತು ಶಿಸ್ತುಬದ್ಧ ಸಮಾಜ ನಿರ್ಮಾಣಕ್ಕೆ ಅವರ ತ್ಯಾಗ ಹಾಗೂ ಸಮರ್ಪಣೆ ಭಾವವನ್ನು ಗೌರವಿಸುತ್ತೇನೆ ಎಂದರು.
ಮಕ್ಕಳಿಗೆ ಇಂದು ಬೇಕಿರುವುದು ವೈದ್ಯರಲ್ಲ. ಬದಲಾಗಿ ಅಂಧಕಾರ ಹೋಗಲಾಡಿಸಿ ಬದುಕು ಕಟ್ಟಿಕೊಡುವ ಶಿಕ್ಷಕರು ಬೇಕಾಗಿದ್ದಾರೆ. ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಏಳಿಗೆ ಆದಾಗ ಮಾತ್ರ ದೇಶ ಹೆಚ್ಚೆಚ್ಚು ಅಭಿವೃದ್ಧಿಗೊಳ್ಳುವುದು. ವಿಕಸಿತ ಭಾರತ(Developed India)ದ ಕನಸು ನನಸಾಗಲಿದೆ ಎಂದು ಹೇಳಿದರು.
ಅರ್ಜಿ ಹಾಕಿ ಪ್ರಶಸ್ತಿ ಪಡೆಯುವುದು ಸೂಕ್ತವಲ್ಲ
ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವುದು ಸೂಕ್ತ ಅಲ್ಲ ಎಂಬ ಚರ್ಚೆ ನಡೆದಿದ್ದು, ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರುವ ಹಾಗೆ ನಾವು ಕೆಲಸ ಮಾಡಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ(State Government Employees Association)ದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಲಹೆ ನೀಡಿದರು. ಶಿಕ್ಷಣ ಇಲಾಖೆಯು ಬಹುದೊಡ್ಡ ಸಂಖ್ಯೆಯ ಕುಟುಂಬ ಹೊಂದಿದೆ. 31 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಕೆಲಸ ಮಾಡುತ್ತಿದ್ದಾರೆ. ಅನೇಕ ಜವಾಬ್ದಾರಿಗಳಿರುವ ಇಲಾಖೆ ಇದಾಗಿದೆ. ಇಂತಹ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡುವ ಮೂಲಕ ಗೌರವಿಸುತ್ತಾ ಬರಲಾಗಿದೆ. ಅನೇಕ ಶಿಕ್ಷಕರು ಎಲೆ ಮರೆಯ ಕಾಯಿಯಂತೆ ಪ್ರಾಮಾಣಿಕವಾಗಿ, ಕಳಕಳಿಯಿಂದ, ಪ್ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ, ತಂತ್ರಜ್ಞಾನ, ರಾಜಕೀಯ, ವಿಜ್ಞಾನ, ಕಲೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಶಿಕ್ಷಕರಿದ್ದಾರೆ. ಶಿಕ್ಷಕರಿಗೆ ಹೆಚ್ಚಿನ ಸವಾಲುಗಳಿದ್ದು, ಎಲ್ಲರು ಸೇರಿ ಎದುರಿಸಬೇಕಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಬಲ್ಕೀಶ್ ಬಾನು ಮಾತನಾಡಿದರು. ಬೆಂಗಳೂರಿನ ಕೇರಿಂಗ್ ವಿತ್ ಕಲರ್ಸ್-ಎ ಮಾನಸಿ ಕಿರ್ಲೋಸ್ಕರ್ ವ್ಯವಸ್ಥಾಪಕ ಡಾ. ಡಿ.ಆರ್.ಪ್ರಸನ್ನಕುಮಾರ್ ವಿಶೇಷ ಉಪನ್ಯಾಸ(Special lecture) ನೀಡಿದರು. ಶಿಕ್ಷಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ 21 ಅತ್ಯುತ್ತಮ ಶಿಕ್ಷಕರು, 31 ವಿಶೇಷ ಉತ್ತಮ ಶಿಕ್ಷಕರು ಹಾಗೂ 84 ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಎಚ್.ಎಂ.ಮಧು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಬಿ.ನಿಖಿಲ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್, ಡಿಡಿಪಿಐ ಎಸ್.ಆರ್.ಮಂಜುನಾಥ್, ಬಿಇಒ ರಮೇಶ್ ಉಪಸ್ಥಿತರಿದ್ದರು.