ಸೊರಬದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಲಿರುವ ಪ್ರಾಚಾರ್ಯ ಎಂ.ಸುರೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಚಂದ್ರಪ್ಪ ಗುಂಡಪಲ್ಲಿ, ನಾಗರಾಜ್ ಜೈನ್ ಇತರರಿದ್ದರು. 
ಶಿವಮೊಗ್ಗ

ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಮುಖ್ಯ

ಸೊರಬ: ಸಂತೃಪ್ತ ವೃತ್ತಿ ನಿರ್ವಹಣೆಯಿಂದ ಸಮಾಜಕ್ಕೆ ಆಗುವ ಅನುಕೂಲ ಅಪರಿಮಿತ ಎಂದು ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಲಿರುವ ಪ್ರಾಚಾರ್ಯ ಎಂ.ಸುರೇಶಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಎಲ್ಲರಿಗೂ ಮಾದರಿಯಾದ ಕಾರ್ಯ ನಿರ್ವಹಣೆ ಶ್ಲಾಘನೀಯ ಎಂದು ತಿಳಿಸಿದರು.
ಎಂ.ಸುರೇಶಪ್ಪ ಅವರು 24 ವರ್ಷ ಉಪನ್ಯಾಸಕರಾಗಿ ಹಾಗೂ 8 ವರ್ಷ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಕಾಲೇಜಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಜೈನ್ ಮಾತನಾಡಿ, ಸಮಯ ಪ್ರಜ್ಞೆ, ತಾಳ್ಮೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶಿಕ್ಷಕರು ಉತ್ತಮ ಕಾಳಜಿ ಹೊಂದುವುದು ಅವಶ್ಯ ಎಂದು ತಿಳಿಸಿದರು.
ಕಾಲೇಜಿನ ಎರಡನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಾಚಾರ್ಯ ಎಂ.ಸುರೇಶಪ್ಪ, ಜ್ಯೋತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವೀರೇಶ್ ಶಿಗ್ಗಾ, ವಿಜಯೇಂದ್ರ, ಪುಷ್ಪಾ, ಬಗರ್‌ಹುಕುಂ ತಾಲೂಕು ಅಧ್ಯಕ್ಷ ಎಂ.ಡಿ.ಶೇಖರ್, ನೌಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಇತರರಿದ್ದರು.