ಕಾರ್ಗಲ್‌ನಲ್ಲಿ ಕೆಪಿಸಿ ಮಹಿಳಾ ಉದ್ಯೋಗಿಗಳ ಬಳಗ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಬಳಗದ ವಾರ್ಷಿಕೋತ್ಸವದಲ್ಲಿ ಬಾಲ ನ್ಯಾಯ ಮಂಡಳಿ ಸದಸ್ಯೆ ರೇಖಾ ಅವರನ್ನು ಸನ್ಮಾನಿಸಲಾಯಿತು. ಎಚ್.ವಿ.ಪೂರ್ಣಿಮಾ, ಎಸ್.ದಿವ್ಯಾ, ಎಂ.ಮಾದೇಶ್, ಆರ್.ಶಿವಕುಮಾರ್ ಇತರರಿದ್ದರು.
ಕಾರ್ಗಲ್: ಪಾಲಕರು ಕೂಡು ಕುಟುಂಬದಲ್ಲಿ ಜವಾಬ್ದಾರಿ ತೆಗೆದುಕೊಂಡು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದು ಬಾಲನ್ಯಾಯ ಮಂಡಳಿ ಸದಸ್ಯೆ ರೇಖಾ ಗಿರೀಶ್ ಹೇಳಿದರು.
ಕೆಪಿಸಿ ಮಹಿಳಾ ಉದ್ಯೋಗಿಗಳ ಬಳಗದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬಳಗದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಸಮಯ ಮೀಸಲಿಡುತ್ತೇವೆ. ಕೇಳಿದ ಎಲ್ಲವನ್ನೂ ಕೊಡಿಸುವ ಮೂಲಕ ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎನ್ನುವ ತೃಪ್ತಿ ಇದೆ. ಆದರೆ ಅಗತ್ಯವಾಗಿ ಬೇಕಾದ ಸಂಸ್ಕಾರದ ಮೂಲಕ ಮಾನವೀಯ ಮೌಲ್ಯ ಹೇಳಿಕೊಡುವುದನ್ನು ಮರೆತಿದ್ದೇವೆ ಎಂದರು.
ತಂದೆ ಮತ್ತು ತಾಯಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದಾರಿತಪ್ಪುವ ಅಪಾಯ ಎದುರಾಗಿದೆ. ಇದಕ್ಕೆ ಬಾಲ ನ್ಯಾಯ ಮಂಡಳಿ ಅಡಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಮಹಿಳೆಯರಿಗೆ ಕೆಲಸದ ಜಾಗದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ನೊಂದವರು ಇಲ್ಲಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಸಮಾಜದಲ್ಲಿ ವಿಭಿನ್ನ ಬಗೆಯ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ದೂರು ದಾಖಲಾಗುವುದನ್ನು ನಾವು ಕಾಣುತ್ತೇವೆ. ಸಮಾಜದಲ್ಲಿ ದಿನೆದಿನೇ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದರು.
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೆಪಿಸಿ ಮಹಿಳಾ ಉದ್ಯೋಗಿಗಳು ಮತ್ತು ಬಳಗದಿಂದ ಬಹುಮಾನ ನೀಡಲಾಯಿತು. ಕೆಪಿಸಿ ಸಿವಿಲ್ ಚ್ೀ ಇಂಜಿನಿಯರ್ ಎಂ.ಮಾದೇಶ್, ಅಧೀಕ್ಷಕ ಅಭಿಯಂತ ಆರ್.ಶಿವಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ಎಚ್.ವಿ.ಪೂರ್ಣಿಮಾ, ಮಹಿಳಾ ಉದ್ಯೋಗಿಗಳ ಬಳಗದ ಅಧ್ಯಕ್ಷೆ ಎಸ್.ದಿವ್ಯಾ, ಎಂಪ್ಲಾಯೀಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ, ಶ್ವೇತಾ, ಗೌರಮ್ಮ, ಚೈತ್ರಾ, ರತ್ನ, ಗೌರಿ ಇತರರಿದ್ದರು.