ಭದ್ರಾವತಿ ತಾಲೂಕಿನ ದೊಣಬಘಟ್ಟ, ಬಿಳಿಕಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ ಸಂಬಂಧ ಡಿಪಿಆರ್ ತಯಾರಿಸಲು ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಸುನಂದಾ ಅವರಿಗೆ ಆರ್.ವೇಣುಗೋಪಾಲ್, ಬಿ.ವಿ.ಗಿರಿ ಮನವಿ ಸಲ್ಲಿಸಿದರು.
ಭದ್ರಾವತಿ: ತಾಲೂಕಿನ ದೊಣಬಘಟ್ಟ ಹಾಗು ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಸಂಬಂಧ ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿ(ಡಿಪಿಆರ್) ತಯಾರಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಭಾರ ಪ್ರಧಾನ ಅಭಿಯಂತ ಎ.ಸುನಂದಾ ಅವರಿಗೆ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್‌ನಿಂದ ಮನವಿ ಸಲ್ಲಿಸಲಾಯಿತು.
ಈ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಿಗೆ ಬಿಳಿಕಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೆರೆಯಲ್ಲಿ ಜಡ್ಡು ವಿಪರೀತ ಪ್ರಮಾಣದಲ್ಲಿ ಬೆಳೆದಿದೆ. ಮೀನು ಸಾಕಣೆ ಮಾಡಲಾಗುತ್ತಿದೆ. ವ್ಯವಸಾಯಕ್ಕೆ ಬಳಸಲಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕೆರೆಯ ನೀರಿಗೆ ಸೇರುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಪಿಡಿಒಗಳು ಕೆರೆಯ ನೀರಿನ ಬದಲಿಗೆ ಕಾಗದನಗರ ಬಳಿ ಇರುವ ಭದ್ರಾ ನದಿಯಿಂದ ನೀರು ಸರಬರಾಜು ಮಾಡಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಅಧೀಕ್ಷಕ ಇಂಜಿನಿಯರ್ ಅವರು ಪ್ರಧಾನ ಅಭಿಯಂತರಿಗೆ ಜೂ.30ರಂದು ಅಂದಾಜು ಪಟ್ಟಿ ತಯಾರಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕೆಂದು ಟ್ರಸ್ಟ್ ಮುಖ್ಯಸ್ಥ ಆರ್.ವೇಣುಗೋಪಾಲ್ ಒತ್ತಾಯಿಸಿದ್ದಾರೆ.