ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಗೀತಾ ರಾಜ್​ಕುಮಾರ್​, ಹೇಮಂತ್​, ಬಷೀರ್​ ಅಹಮದ್​, ಪ್ರೇಮಾ ಬದರಿನಾರಾಯಣ ಇತರರಿದ್ದರು. 
ಶಿವಮೊಗ್ಗ

ಉದ್ಯಾನ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒಮ್ಮತದ ಅಭಿಪ್ರಾಯ
  • ತಂತಿಬೇಲಿ ಅಳವಡಿಸಲು ಒತ್ತಾಯ
  • ವಿದ್ಯುತ್​ ದೀಪಗಳ ಬದಲಾಯಿಸಲು ವಿಳಂಬ
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನಗಳು ಹಾಗೂ ಸಾರ್ವಜನಿಕ ಉಪಯೋಗಕ್ಕೆ ಕಾಯ್ದಿರಿಸಿದ ನಿವೇಶನಗಳನ್ನು ಒತ್ತುವರಿ ಮಾಡದಂತೆ ತಂತಿ ಬೇಲಿ ಅಳವಡಿಸಬೇಕೆಂದು ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ಒತ್ತಾಯಿಸಿದರು. 
ಸದಸ್ಯ ಬಿ.ಟಿ.ನಾಗರಾಜ್​ ವಿಷಯ ಪ್ರಸ್ತಾಪಿಸಿ, ಹೊಸ ಬಡಾವಣೆ ಅಭಿವೃದ್ಧಿಪಡಿಸುವಾಗ ಉದ್ಯಾನ ಹಾಗೂ ಸಾರ್ವಜನಿಕ ಉಪಯೋಗಕ್ಕೆ ನಿವೇಶನ ಕಾಯ್ದಿರಿಸುವುದು ಕಡ್ಡಾಯ. ಹೀಗೆ ಕಾಯ್ದಿರಿಸಿದ ಸ್ಥಳಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಳ್ಳುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ನಗರಸಭೆ ಈ ಒತ್ತುವರಿ ತೆರವುಗೊಳಿಸಿ ಉದ್ಯಾನ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಕಾಯ್ದಿರಿಸಿದ ನಿವೇಶನಗಳ ಚಕ್ಕುಬಂಧಿ ಗುರುತಿಸಿ ತಂತಿ ಬೇಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು. 
ಸದಸ್ಯ ಬಿ.ಕೆ.ಮೋಹನ್​ ಪ್ರತಿಕ್ರಿಯಿಸಿ, ಒಂದೇ ಬಡಾವಣೆಯಲ್ಲಿ ಹಲವು ಸಣ್ಣ ಉದ್ಯಾನಗಳಿಗೆ ಸ್ಥಳ ಮೀಸಲಿರಿಸಿರುವ ನಿದರ್ಶನಗಳಿವೆ. ಇದರ ಬದಲು ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆ ತಂದು ಬಡಾವಣೆಯಲ್ಲಿ ಒಂದೇ ವಿಶಾಲವಾದ ಉದ್ಯಾನಕ್ಕೆ ಸ್ಥಳ ಮೀಸಲಿರಿಸಿದರೆ, ಅಂತಹ ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸುಲಭವಾಗುತ್ತದೆ ಎಂದರು.
ನಗರಸಭೆ ಆಯುಕ್ತ ಕೆ.ಎನ್​.ಹೇಮಂತ್​ ಮಾತನಾಡಿ, 16ನೇ ಹಣಕಾಸು ಆಯೋಗದ ಅನುದಾನದಲ್ಲಿ ನಗರಸಭೆಗೆ ಸಿಗುವ ಹಣವನ್ನು ಸಾರ್ವಜನಿಕ ಸ್ಥಳಗಳು ಒತ್ತುವರಿಯಾಗದಂತೆ ತಂತಿ ಬೇಲಿ ಅಳವಡಿಸಲು ಬಳಸಬಹುದು ಎಂದು ಸಲಹೆ ನೀಡಿದರು.
ಸದಸ್ಯೆ ಲತಾ ಚಂದ್ರಶೇಖರ್​ ಮಾತನಾಡಿ, 34ನೇ ವಾರ್ಡ್​ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕಸ ಸಂಗ್ರಹಿಸುವ ಗಾಡಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟು ಹೋಗಿರುವ ವಿದ್ಯುತ್​ ದೀಪಗಳನ್ನು ಬದಲಾಯಿಸಲು ವಿಳಂಬವಾಗುತ್ತಿದೆ ಎಂದು ದೂರಿದರು.
ಸದಸ್ಯೆ ನಾಗರತ್ನ ಮಾತನಾಡಿ, ನಮ್ಮ ವಾರ್ಡ್​ನಲ್ಲಿ ನಡೆಯುತ್ತಿದ್ದ ಚರಂಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವಿರಿ. ಶಾಸಕರೇ ಹೇಳಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು. ಸಮಜಾಯಿಸಿ ನೀಡಿದ ಆಯುಕ್ತ ಕೆ.ಎನ್​.ಹೇಮಂತ್​, ನಿಮ್ಮ ವಾರ್ಡ್​ನ ಆ ಭಾಗದಲ್ಲಿ ಸೂಡಾ ನೆ ಪ್ರಕಾರ ಚರಂಡಿ ಕಾಮಗಾರಿ ಇರಲಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದ್ದರಿಂದ ಕಾಮಗಾರಿ ನಿಲ್ಲಿಸಲಾಗಿದೆ  ಎಂದರು.
ಎಲ್ಲಾ ವಾರ್ಡ್​ಗಳಲ್ಲಿಯೂ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಹಲವು ಸದಸ್ಯರು ದೂರಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಬಿ.ಕೆ.ಮೋಹನ್​, ಮೊದಲು ಅಧಿಕಾರಿಗಳೇ ಸರಿಯಿಲ್ಲ. ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಕೆಲಸ ತೆಗೆದುಕೊಂಡಿದ್ದರೆ ಎಲ್ಲ ವಾರ್ಡ್​ನ ಕಾಮಗಾರಿಗಳು ಸಂಪೂರ್ಣವಾಗಿ ಮುಗಿಯುತ್ತಿತ್ತು. ಅಧಿಕಾರಿಗಳು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಕೆಲಸ ಮಾತ್ರ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಧ್ಯೆ ಜೆ.ಸಿ.ಗೀತಾರಾಜ್​ ಕುಮಾರ್​, ಉಪಾಧ್ಯ ಬಷೀರ್​ ಅಹಮದ್​, ಸ್ಥಾಯಿ ಸಮಿತಿ ಅಧ್ಯೆ ಪ್ರೇಮಾ ಬದರೀನಾರಾಯಣ್​ ಇದ್ದರು. 
ನಗರಸಭೆ  ಸದಸ್ಯರ ಅಧಿಕಾರ ಅವಧಿ ಕೇವಲ ಎರಡು ತಿಂಗಳು ಉಳಿದಿದೆ. ಇದುವರೆಗೆ ವಾರ್ಡ್​ ವ್ಯಾಪ್ತಿಯಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಶಾಸಕರ ಹೆಸರಾಗಲಿ, ಸದಸ್ಯರುಗಳ ಹೆಸರಾಗಲಿ ಬರೆಯದೆ ಹಾಗೆಯೇ ಬಿಡಲಾಗಿದೆ. ನಾವು ಯಾರಿಗೆ ಕೇಳಬೇಕು.
> ಚನ್ನಪ್ಪ, ನಗರಸಭೆ ಸದಸ್ಯ 
ಸಮಸ್ಯೆಗೆ ಪರಿಹಾರ ಒದಗಿಸಿ 
ಬಿ.ಎಚ್​.ರಸ್ತೆ ಹಾಗೂ ವಾಣಿಜ್ಯ ಚಟುವಟಿಕೆ ಹೆಚ್ಚು ಇರುವ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಅವೈಜ್ಞಾನಿಕವಾಗಿ ವಾಹನಗಳ ನಿಲುಗಡೆಯಿಂದ ಸಂಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಕೆಲ ಸಗಟು ಅಂಗಡಿಗಳ ಮುಂದೆ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸರಕುಗಳ ಅನ್​ಲೋಡಿಂಗ್​ ನಡೆಯುತ್ತಿದೆ. ಕೆಲವು ಭಾಗದಲ್ಲಿ ಅಂಗಡಿಯವರು ಪಾದಚಾರಿ ಮಾರ್ಗಗಳ ಮೇಲೆ ವಸ್ತುಗಳನ್ನು ಇರಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಅನೇಕ ಸದಸ್ಯರು ದೂರಿದರು.