ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಯಂಸೇವಾ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರೊ. ಸಿರಾಜ್ ಅಹ್ಮದ್, ಡಾ. ನಾಗೇಶ್ ಎಸ್. ಡೋಂಗ್ರೆ, ಡಾ. ಪ್ರಸನ್ನಕುಮಾರ್, ಬಾಬು ಆಂಜನಪ್ಪ, ಗಿರೀಶ್ ಪಟೇಲ್, ಕೆ.ಎನ್.ಮಹಾದೇವಸ್ವಾಮಿ, ಡಾ. ಎಚ್.ಎಸ್.ಕೃಪಾಲಿನಿ ಇದ್ದರು.
- ಡಾ. ನಾಗೇಶ್ ಎಸ್. ಡೋಂಗ್ರೆ ಅಭಿಮತ
- ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಲಿ
- ಸಹ್ಯಾದ್ರಿ ಕಾಲೇಜಿನಲ್ಲಿ ಸಂವಾದ
ಶಿವಮೊಗ್ಗ: ಸಮಾಜ (society) ಇಂದು ಬೇರೆ ಬೇರೆ ದಿಕ್ಕಿನತ್ತ ಹೊರಳುತ್ತಿದೆ. ಮನುಷ್ಯನ ವಿಕೃತಿ ಹೆಚ್ಚಾಗುತ್ತಿದೆ. ಜಗತ್ತು ಯುದ್ಧಗಳ (wars) ಭಯದಲ್ಲಿದೆ. ಇಂತಹ ಸಂದರ್ಭಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹುಮುಖ್ಯ ಎಂದು ಸಹಕಾರ (coperative) ಸಂಘಗಳ ಜಂಟಿ ನಿಬಂಧಕ ಸಹಕಾರ ಸಂಘಗಳ ಜಂಟಿ ನಿಬಂಧಕ ಹಾಗೂ ಭೂ ಅಭಿವೃದ್ಧಿ ಅಧಿಕಾರಿ ಡಾ. ನಾಗೇಶ್ ಎಸ್. ಡೋಂಗ್ರೆ ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ಸೇವಾ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಸಂಸ್ಥೆಗಳು ಸಮಾಜದ ಜೀವಕೋಶಗಳಿದ್ದಂತೆ ಎಂದರು.
ಸಮಾಜದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಸಮಾಜ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ವ್ಯಕ್ತಿ ಮತ್ತು ಸಮುದಾಯದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಸಮಾಜದ ಸಮಗ್ರ ಅಭಿವೃದ್ಧಿಗೂ ಕಾರಣವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವಕ್ಕೂ ಶಕ್ತಿಯಾಗುತ್ತದೆ. ವಿದ್ಯಾರ್ಥಿಗಳು ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸೇವೆ ಪುಸ್ತಕ ಓದುವುದರಿಂದ ಬರುವುದಿಲ್ಲ. ಅದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಡಿವೈಎಸ್ಪಿ ಬಾಬು ಆಂಜನಪ್ಪ, ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಾಟೀಲ್ ಮಾತನಾಡಿ, ವ್ಯಸನಗಳಿಗೆ ಬಲಿಯಾಗಬೇಡಿ. ಗಾಂಜಾದಂತಹ ಅಪಾಯಕಾರಿ ವಸ್ತು ಸೇವನೆ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಬದುಕನ್ನು ನಾಶಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿರಿಯ ಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಐಕ್ಯುಎಸಿ ಸಂಚಾಲಕ ಡಾ. ಎಚ್.ಪಿ.ಮಂಜುನಾಥ್, ಕೆ.ಎನ್.ಮಹಾದೇವಸ್ವಾಮಿ, ಸಂಗೀತಾ, ಕುಮಾರಸ್ವಾಮಿ, ಶಶಿಕುಮಾರ್, ರವಿ, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಭಾರತಿ ಚಂದ್ರಶೇಖರ್, ರೇಖಾ, ಧರಣೇಂದ್ರ ದಿನಕರ್ ಇತರರಿದ್ದರು.
ಪ್ರತಿಫಲವಿಲ್ಲದೆ ಸೇವೆಯಿಂದ ಸಾರ್ಥಕ್ಯ
ನಮ್ಮ ಸುತ್ತ ಇರುವ ಜನರ ಅನುಕೂಲಕ್ಕಾಗಿ ಪ್ರತಿಫಲ ಬಯಸದೆ ಮಾಡುವ ಕೆಲಸಗಳೇ ಸಮಾಜಸೇವೆ ಎನಿಸಿಕೊಳ್ಳುತ್ತವೆ ಎಂದು ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಎಚ್.ಎಸ್.ಕೃಪಾಲಿನಿ ಹೇಳಿದರು. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕೌಶಲಾಭಿವೃದ್ಧಿ, ಪರಿಸರ ಮುಂತಾದ ಹಲವು ವಿಭಾಗಗಳಲ್ಲಿ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಮುಖಾಮುಖಿಯಲ್ಲಿ ಸಮಾಜ ಸೇವಾ ಸಂಸ್ಥೆಗಳಾದ ಜೀವನಸಂಜೆ ವೃದ್ಧಾಶ್ರಮ, ರೆಡ್‌ಕ್ರಾಸ್, ರಕ್ಷಾ ಸಮುದಾಯ, ತಾಯಿಮನೆ, ಗುಡ್‌ಲಕ್ ಆರೈಕೆ ಕೇಂದ್ರ, ಫ್ಯಾಮಿಲಿ ಪ್ಲಾೃನಿಂಗ್ ಅಸೋಸಿಯೇಷನ್, ಅಭಯಧಾಮ, ಆಶಾಕಿರಣ, ಮಾನಸ ನರ್ಸಿಂಗ್ ಹೋಂ, ಮಾಧವ ನೆಲೆ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಪರಿಸರ ಅಧ್ಯಯನ ಕೇಂದ್ರ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮುಂತಾದ ಸಂಘ ಸಂಸ್ಥೆಗಳು ಭಾಗವಹಿಸಿದ್ದವು.
ವಿದ್ಯಾರ್ಥಿಗಳಿಗೆ ಸಮುದಾಯದ ಕಾಳಜಿ ಅಗತ್ಯ. ಸೇವೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ. ಶಿಕ್ಷಣವೇ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆ ಜತೆಗೆ ಸಾಮಾಜಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸಿರುವ 26ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರಮುಖರಿಂದ ಮಾಹಿತಿ ಪಡೆದುಕೊಳ್ಳಬೇಕು.