- ಉಚಿತ ವಿದ್ಯುತ್ ನೀಡುತ್ತಿರುವ ಪರಿಣಾಮ
- ಹಳ್ಳಿಗಳಲ್ಲಿ ಮನೆಯ ವಿನ್ಯಾಸ, ಮಳೆ ಕಾರಣ
- ಸಹಾಯಧನ ಪಡೆದವರು 675 ಮಂದಿ ಮಾತ್ರ
ಸೌರ (solar) ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಪಿಎಂ ಸೂರ್ಯಘರ್ (suryaghar) ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಮೂರು ವರ್ಷಗಳಲ್ಲಿ 1,228 ಅರ್ಜಿಗಳು ಸಲ್ಲಿಕೆಯಾಗಿದ್ದರೆ ಸಹಾಯಧನ (subsidy) ಪಡೆದವರು 675 ಮಂದಿ ಮಾತ್ರ.
ದಶಕಗಳ ಹಿಂದಿನ ವಿನ್ಯಾಸದ ಹೆಂಚಿನ ಮನೆಗಳು, ವರ್ಷದ ನಾಲ್ಕೈದು ತಿಂಗಳ ಮಳೆ, ಮೋಡ ಕವಿದ ವಾತಾವರಣದಿಂದ ಜನರು ಮನೆ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ನೀಡುತ್ತಿರುವುದರಿಂದ ಜನರು ಪರ್ಯಾಯ ಶಕ್ತಿ ಬಳಕೆಗೆ ಮುಂದಾಗುತ್ತಿಲ್ಲ
2024ರಲ್ಲಿ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿತ್ತು. ಅಂದಿನಿಂದ ಇದುವರೆಗೆ 691 ಅರ್ಜಿಗಳನ್ನು ಸಬ್ಸಿಡಿಗಾಗಿ ಅನುಮೋದಿಸಲಾಗಿದೆ. 221 ಅರ್ಜಿಗಳ ಅನುಮೋದನೆ ಬಾಕಿಯಿದೆ. 9 ಅರ್ಜಿಗಳಿಗೆ ಸಂಬಂಧಿಸಿ ಸ್ಥಳ ಪರಿಶೀಲಿಸಬೇಕಿದೆ.
ಯೋಜನೆ ಪ್ರಸ್ತುತ ಸಂದರ್ಭದಲ್ಲಿ ಲಾಭದಾಯಕ ಎಂಬುದನ್ನು ಜನರು ಒಪ್ಪಿಕೊಳ್ಳುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಫಲ ನೀಡುವ ಯೋಜನೆಗೆ ಈಗ ಸಾಲ ಮಾಡುವುದೇಕೆ ಎಂಬ ಪ್ರಶ್ನೆ ಕೇಳುತ್ತಾರೆ. ಕೆಲವೆಡೆ ಬ್ಯಾಂಕ್‌ಗಳೂ ಸಾಲ ನೀಡಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಇವೆಲ್ಲ ಕಾರಣಗಳಿಂದ ಸೌರ ವಿದ್ಯುತ್ ಉತ್ಪಾದನೆಗೆ ಜಿಲ್ಲೆಯಲ್ಲಿ ತೀವ್ರ ಹಿನ್ನಡೆಯಾಗಿದೆ.
ಈಗಾಗಲೇ ಪಿಎಂ ಸೂರ್ಯ ಘರ್ ಯೋಜನೆಯ ಫಲಾನುಭವಿಗಳಾದವರು ಇದನ್ನು ಮೆಚ್ಚಿಕೊಂಡಿದ್ದಾರೆ. ನಾನು ಒಂದೂವರೆ ವರ್ಷದ ಹಿಂದೆ ಮನೆಗೆ 3 ಕಿಲೋವಾಟ್ (ಕಿವಾ)ನ ಎರಡು ಘಟಕಗಳನ್ನು ಅಳವಡಿಸಿಕೊಂಡೆ. ಸಬ್ಸಿಡಿ ಹೊರತುಪಡಿಸಿ ಇದಕ್ಕೆ ಸುಮಾರು 3.50 ಲಕ್ಷ ರೂ. ಖರ್ಚಾಗಿದೆ. ಮೂರು ಕಿಲೋವಾಟ್‌ನ ಒಂದು ಘಟಕಕ್ಕೆ 78 ಸಾವಿರ ರೂ. ಸಹಾಯ ಧನ ಸಿಕ್ಕಿತು. ಒಂದೂವರೆ ವರ್ಷದಿಂದ ನಾನು ವಿದ್ಯುತ್ ಬಿಲ್ ಪಾವತಿಸಿಲ್ಲ. ಹೆಚ್ಚುವರಿ ವಿದ್ಯುತ್ ಉತ್ಪಾದನೆಗಾಗಿ ಮೆಸ್ಕಾಂನಿಂದಲೇ ಹಣ ಪಡೆಯುತ್ತಿದ್ದೇನೆ ಎನ್ನುತ್ತಾರೆ ಶಿವಮೊಗ್ಗದ ಚಂದ್ರಮೌಳಿ.
ಆರಂಭದಲ್ಲಿ ಈ ಯೋಜನೆ ಘೋಷಣೆಯಾದಾಗ ಜನರಿಂದ ಉತ್ತಮ ಸ್ಪಂದನೆಯ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ನೋಂದಣಿ ಸಂಖ್ಯೆ ನಿರಂತರವಾಗಿ ಏರಿಕೆ ಕಂಡ ಕಾರಣ ಸಾಲ ವಿತರಣೆಗೆ ಬ್ಯಾಂಕ್‌ಗಳೂ ಸಜ್ಜಾದವು. ಆದರೆ ಕೆಲವೇ ದಿನಗಳಲ್ಲಿ ಈ ನಿರೀಕ್ಷೆ ಹುಸಿಯಾಯಿತು. ನೋಂದಣಿ ಮಾಡಿಕೊಂಡವರ ಸಂಖ್ಯೆ ಸಾವಿರದಲ್ಲಿದ್ದರೆ, ಬ್ಯಾಂಕ್ ಕದ ತಟ್ಟಿದವರ ಸಂಖ್ಯೆ ನೂರರ ಲೆಕ್ಕಕ್ಕೆ ಇಳಿಕೆಯಾಯಿತು. ಮೆಸ್ಕಾಂ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಏನೇ ಹರಸಾಹಸಪಟ್ಟರೂ ಸೂರ್ಯಘರ್‌ಗೆ ಶಕ್ತಿ ತುಂಬಲು ಸಾಧ್ಯವಾಗಲೇ ಇಲ್ಲ. ಇತ್ತೀಚೆಗೆ ನೋಂದಣಿ ಪ್ರಮಾಣವೂ ತೀವ್ರ ಕುಸಿದಿದೆ.
ಜನರಿಂದ ತಪ್ಪು ಗ್ರಹಿಕೆ
ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂಬ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಂಡರು. ಇದರ ಪ್ರಯೋಜನ ಪಡೆಯಲು ನಾವು ಹಣ ಖರ್ಚು ಮಾಡಿ ಸೌರ ವಿದ್ಯುತ್ ಉತ್ಪಾದನಾ ಘಟಕ ಹಾಕಿಕೊಳ್ಳಬೇಕಾಗುತ್ತದೆ ಎಂಬುದನ್ನು ಅರಿಯದೇ ಉತ್ಸಾಹದಿಂದ ನೋಂದಾಯಿಸಿಕೊಂಡರು. ಆನ್‌ಲೈನ್‌ನಲ್ಲೇ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದ್ದರಿಂದ ಹೆಸರು ನೀಡುವವರಿಗೆ ಕೊರತೆಯಾಗಲಿಲ್ಲ. ಕೆಲವೆಡೆ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ನಿಂತು ನೋಂದಾಯಿಸಿದರು. ಆದರೆ ಘಟಕ ಸ್ಥಾಪನೆ ವಿಷಯದಲ್ಲಿ ಮಾತ್ರ ಈ ಉತ್ಸಾಹ ಕಂಡು ಬರಲಿಲ್ಲ.
ಸೂರ್ಯ ಘರ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕೆಲವೊಂದು ಸೋಲಾರ್ ಏಜೆನ್ಸಿಗಳನ್ನು ಗುರುತು ಮಾಡಿತ್ತು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರು ತಮಗೆ ಬೇಕಾದ ಏಜೆನ್ಸಿ ಗುರುತಿಸಿ ಅವರೊಂದಿಗೆ ಮಾತುಕತೆ ನಡೆಸಿ ತಮಗೆ ಅಗತ್ಯವಿರುವ ಸೌರಘಟಕ ಸ್ಥಾಪನೆ ಬಗ್ಗೆ ಮಾಹಿತಿ ಪಡೆಯಬೇಕಿತ್ತು. ಬಳಿಕ ಫಲಾನುಭವಿ ಹಾಗೂ ಏಜೆನ್ಸಿ ಮೆಸ್ಕಾಂ ಅಧಿಕಾರಿಗಳನ್ನು, ಸಂಬಂಧಪಟ್ಟ ಬ್ಯಾಂಕ್‌ನ್ನೂ ಸಂಪರ್ಕಿಸಬೇಕಿತ್ತು. ವಿಪರ್ಯಾಸವೆಂದರೆ ನೋಂದಣಿ ಮಾಡಿಕೊಂಡ ಶೇ.80ಕ್ಕೂ ಅಧಿಕ ಜನ ಮುಂದಿನ ಮಾರ್ಗಸೂಚಿಗಳನ್ನು ಪಾಲಿಸಲೇ ಇಲ್ಲ.
ಪಿಎಂ ಸೂರ್ಯ ಘರ್ ಯೋಜನೆಯಡಿ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ಸೌರ ಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ.60ರವರೆಗೂ ಸಬ್ಸಿಡಿ ದೊರೆಯುತ್ತದೆ. ಒಂದು ಕಿಲೋವಾಟ್‌ನಿಂದ ಮೂರು ಕಿಲೋವಾಟ್‌ವರೆಗೆ ಸಹಾಯಧನ ದೊರೆಯಲಿದೆ. ಒಂದು ಕಿಲೋವಾಟ್‌ಗೆ 30 ಸಾವಿರ, ಎರಡಕ್ಕೆ 60 ಸಾವಿರ, ಮೂರು ಕಿಲೋವಾಟ್ ಹಾಗೂ ಅದಕ್ಕಿಂದ ಹೆಚ್ಚಿನ ಸಾಮರ್ಥ್ಯದ ಘಟಕ ಸ್ಥಾಪನೆಗೆ ಗರಿಷ್ಠ 78 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ.
ಸಾಗರ, ಶಿವಮೊಗ್ಗದಲ್ಲಿ ಒಕೆ
ಸುಗಮವಾಗಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಮೆಸ್ಕಾಂ ಜಿಲ್ಲೆಯ ಏಳು ತಾಲೂಕುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಂಡಿದೆ. ಶಿವಮೊಗ್ಗ ಹಾಗೂ ಸಾಗರ ತಾಲೂಕಿನಲ್ಲಿ ಮಾತ್ರ ಪಿಎಂ ಸೂರ್ಯಘರ್‌ಗೆ ಹೆಚ್ಚು ಆಸಕ್ತಿ ತೋರಿದ್ದಾರೆ. ಹಾಲಿ ಹೆಚ್ಚಿನ ಘಟಕಗಳಿರುವುದು ಶಿವಮೊಗ್ಗ, ಸಾಗರ ತಾಲೂಕಿನಲ್ಲಿ ಮಾತ್ರ.
ಮಲೆನಾಡು ಭಾಗದಲ್ಲಿ ನೆರಳುಮುಕ್ತ ಪ್ರದೇಶಗಳನ್ನು ಪಡೆದುಕೊಳ್ಳುವುದು ಸ್ವಲ್ಪ ಕಷ್ಟ. ಗ್ರಾಮೀಣ ಭಾಗದಲ್ಲಿ ಮನೆಗಳ ಮೇಲ್ಛಾವಣಿಗಳು ಸಮತಟ್ಟಾಗಿರುವುದು ಕಡಿಮೆ. ಹೀಗಾಗಿ ಸೌರ ಫಲಕಗಳನ್ನು ಅಳವಡಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಗೃಹಜ್ಯೋತಿ ಮೂಲಕ ಉಚಿತವಾಗಿ ವಿದ್ಯುತ್ ಲಭಿಸುತ್ತಿರುವ ಕಾರಣ ಜನರು ಸೌರ ವಿದ್ಯುತ್‌ನತ್ತ ಆಸಕ್ತಿವಹಿಸುತ್ತಿಲ್ಲ. ಪರಿಸರ ಸ್ನೇಹಿಯೂ ಆಗಿರುವ ಈ ಯೋಜನೆ ಆಯ್ಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
— ಹೆಸರು ಹೇಳಲಿಚ್ಚಿಸದ ಮೆಸ್ಕಾಂ ಅಧಿಕಾರಿ