ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶ್ರದ್ಧಾಳನ್ನು ಭೇಟಿ ಮಾಡಿದ ಶಿಕಾರಿಪುರ ಬಿಇಒ ಲೋಕೇಶಪ್ಪ ಅವರು ಆರೋಗ್ಯ ವಿಚಾರಿಸಿದರು. ಸಿಆರ್‌ಪಿ ಮಹೇಶ್ ಇತರರಿದ್ದರು. 
ಶಿವಮೊಗ್ಗ

ಗಾಯಗೊಂಡ ಕ್ರೀಡಾಪಟು ಶ್ರದ್ಧಾಗೆ ಶಸ್ತ್ರಚಿಕಿತ್ಸೆ | BEO visit to hospital

ಶಿರಾಳಕೊಪ್ಪ: ಬಿಳಿಕಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ಕಣಸೋಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಶ್ರದ್ಧಾಳನ್ನು ಶಿಕಾರಿಪುರ ಬಿಇಒ ಕೆ.ಬಿ.ಲೋಕೇಶಪ್ಪ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆ.6ರಂದು ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಶ್ರದ್ಧಾ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಜಂಪ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಮೊಣಕೈಗೆ ತೀವ್ರ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶನಿವಾರ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಿಷಯ ತಿಳಿದ ಲೋಕೇಶಪ್ಪ ಅವರು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿನಿ ಹಾಗೂ ಪಾಲಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಚಿಕಿತ್ಸೆಯ ಪ್ರಗತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ಪರಿಸ್ಥಿತಿಯನ್ನು ಅರಿತ ಬಿಇಒ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ನೆರವು ನೀಡಿದ್ದಾರೆ. ಆಕೆಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಸಹಕಾರ ನೀಡುವುದಾಗಿ ಪಾಲಕರಿಗೆ ಭರವಸೆ ನೀಡಿದರು.
ಮಳವಳ್ಳಿ ಸಿಆರ್‌ಪಿ ಮಹೇಶ್ ಉಪಸ್ಥಿತರಿದ್ದರು.