ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ರಂಜನಿ ರಾಘವನ್ ಉಪನ್ಯಾಸ ನೀಡಿದರು. ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ವಿನಯ್ ಇದ್ದರು.  
ಶಿವಮೊಗ್ಗ

ಮಹಿಳೆಯರ ಸಾಧನೆಗೆ ಬೆಂಬಲ ಅವಶ್ಯ I support woman

ಪ್ರಮುಖ ಮುಖ್ಯಾಂಶಗಳು

  • ಬರಹಗಾರ್ತಿ ರಂಜನಿ ರಾಘವನ್ ಹೇಳಿಕೆ
  • ಕೌಟುಂಬಿಕ ವ್ಯವಸ್ಥೆ ಬಗ್ಗೆ ಭಯ ಬೇಡ
  • ಕರ್ನಾಟಕ ಸಂಘದ ತಿಂಗಳ ಅತಿಥಿ ಕಾರ್ಯಕ್ರಮ
ಶಿವಮೊಗ್ಗ: ಆಧುನಿಕ ಮಹಿಳೆ (woman) ಒಂದರ್ಥದಲ್ಲಿ ಸೂಪರ್ ವುಮೆನ್ ಆಗಿದ್ದಾಳೆ. ಆಕೆ ಕುಟುಂಬದೊಳಗೆ ಹಾಗೂ ಹೊರಗೆ ಅನೇಕ ಜವಾಬ್ದಾರಿ (responsibility) ಗಳನ್ನು ನಿರ್ವಹಿಸುತ್ತಿದ್ದಾಳೆ. ಇದನ್ನು ಗಮನಿಸಿದ ಯುವತಿಯರಿಗೆ ಕೌಟುಂಬಿಕ ವ್ಯವಸ್ಥೆ ಬಗ್ಗೆ ಭಯ (fear) ಮೂಡುತ್ತಿದೆ. ಇದು ಕುಟುಂಬ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬರಹಗಾರ್ತಿ, ಚಿತ್ರ ನಿರ್ದೇಶಕಿ ರಂಜನಿ ರಾಘವನ್ ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ‘ಆಧುನಿಕ ಮಹಿಳೆಯ ಅಭಿವ್ಯಕ್ತಿ ಆಯಾಮಗಳು’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಆಧುನಿಕ ಮಹಿಳೆಗೆ ಪತಿಯ ಬೆಂಬಲವೂ ಬೇಕು. ಅದೇ ರೀತಿ ಮಹಿಳೆ ತನ್ನ ಪತಿಗೆ ಅಗತ್ಯ ಸ್ವಾತಂತ್ರೃ ನೀಡಬೇಕು. ಆಗ ಮಾತ್ರ ಆಧುನಿಕ ಮಹಿಳಾವಾದ ಸೂಕ್ತ ಅರ್ಥ ಪಡೆಯುತ್ತದೆ ಎಂದರು.
ಭಾರತದ ವನಿತೆಯರು ಕ್ರಿಕೆಟ್ ವಿಶ್ವಕಪ್ ಗೆದ್ದಮೇಲೆ ಕ್ರಿಕೆಟ್ ಆಡಲು ಯುವತಿಯರು ಸರದಿಯಲ್ಲಿ ನಿಂತಿದ್ದಾರೆ. ಅದೇ ರೀತಿ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿದ್ದಾರೆ, ಐಶ್ವರ್ಯಾ ರೈ ಮೂರು ದಶಕಗಳ ಹಿಂದೆ ವಿಶ್ವಸುಂದರಿ ಕಿರೀಟ ತೊಟ್ಟಾಗ ಅನೇಕ ಮಹಿಳೆಯರು ತಾವೂ ವಿಶ್ವ ಸುಂದರಿ ಆಗುವ ಕನಸು ಕಂಡಿದ್ದರು. ಆ ದಿನಗಳಲ್ಲಿ ಜನಿಸಿದ ಹೆಣ್ಣು ಮಗುವಿಗೆ ಐಶ್ವರ್ಯಾ ಎಂದು ಹೆಸರಿಟ್ಟು ಸಂಭ್ರಮಿಸಿದ್ದರು. ಯಾವುದೇ ಹೆಣ್ಣಿನ ಸಾಧನೆ ಸುತ್ತಲಿನ ವಾತಾವರಣದಲ್ಲಿ ಸಂಭ್ರಮ ಮೂಡಿಸುತ್ತದೆ. ಬೇರೆ ಮಹಿಳೆಯರಿಗೂ ಸ್ಫೂರ್ತಿ ತುಂಬುತ್ತದೆ ಎಂಬುದಕ್ಕೆ ಇವೆಲ್ಲ ನಿದರ್ಶನಗಳು ಎಂದು ವಿವರಿಸಿದರು.
ತಮ್ಮ ಮಾತಿನ ನಡುವೆ ರಂಜನಿ ರಾಘವನ್ ಅವರು ವಚನಗಳು, ಕನ್ನಡ ಕವಿಗಳ ರಚನೆಯ ಕವಿತೆಯ ಸಾಲುಗಳನ್ನು ಚುಟುಕಾಗಿ, ರಾಗವಾಗಿ ಪ್ರಸ್ತುತಪಡಿಸಿದ್ದು ಪ್ರೇಕ್ಷಕರ ಗಮನಸೆಳೆಯಿತು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು.

ಆಧುನಿಕ ಮಹಿಳೆ ಬಗ್ಗೆ ತಪ್ಪು ಕಲ್ಪನೆ

ಆಧುನಿಕ ಮಹಿಳೆ ಎಂದರೆ ಪಾಶ್ಚಾತ್ಯ ಉಡುಗೆ ತೊಟ್ಟವಳು, ಆಂಗ್ಲ ಭಾಷೆ ಮಾತನಾಡುವವಳು, ನವೀನ ಜೀವನಶೈಲಿ ಅನುಸರಿಸುವವಳು ಎಂಬ ಕಲ್ಪನೆಗಳಿವೆ. ತವರು ಮನೆಯಲ್ಲಿ ನೀಡಿದ ಬಂಗಾರದ ಆಭರಣಗಳನ್ನು ಗಿರವಿ ಅಂಗಡಿಯಲ್ಲಿಟ್ಟು ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುವವಳೂ ಆಧುನಿಕ ಮಹಿಳೆಯೇ ಎಂದು ರಂಜನಿ ರಾಘವನ್ ಹೇಳಿದರು. 12ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಕೇಶವನ್ನೇ ಉಡುಗೆ ಮಾಡಿಕೊಂಡು ಅನುಭವ ಮಂಟಪಕ್ಕೆ ಬಂದು ಚನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಸಾರ್ವಜನಿಕವಾಗಿ ಹೇಳಿದ ಅಕ್ಕಮಹಾದೇವಿ ಕೂಡ ಅಂದಿನ ಸನ್ನಿವೇಶದಲ್ಲಿ ಆಧುನಿಕ ಮಹಿಳೆ. ಇಂದು ಮಹಿಳೆ ತನ್ನ ಅಭಿಪ್ರಾಯ ಹೇಳಿಕೊಂಡರೆ ಆಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದಾಳಿಯೇ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕೀಳು ಭಾವನೆ ಬೇಡ

ಹೆಣ್ಣಿನ ಭಾವನೆಯನ್ನು ಲಘುವಾಗಿ ಕಾಣುವ ಆಕೆಯ ಬಗ್ಗೆ ಕೀಳಾಗಿ ಮಾತನಾಡುವ ಜನ ನಮ್ಮ ನಡುವೆ ಇದ್ದಾರೆ. ಹೆಣ್ಣಿನ ಸುತ್ತಲಿರುವವರಿಗೆ ಆಕೆಯ ಮದುವೆಯ ಬಗ್ಗೆಯೇ ಚಿಂತೆ ಹೊರತು ಸಾಧನೆಯ ಬಗ್ಗೆಯಲ್ಲ. ಮದುವೆಯಾದರೆ ಹೆಣ್ಣಿನ ಬದುಕು ಪರಿಪೂರ್ಣ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಪ್ರತಿ ಮೂರು ತಿಂಗಳಿಗೆ ಮೊಬೈಲ್‌ನಲ್ಲಿರುವ ಆ್ಯಪ್‌ಗಳು ಅಪ್‌ಡೇಟ್ ಆಗುತ್ತಿವೆ. ಆದರೆ 50-60 ವರ್ಷದಿಂದ ಗೃಹಿಣಿಯ ದಿನಚರಿ, ಆಕೆಯ ಪಾತ್ರ ಬದಲಾಗಲೇ ಇಲ್ಲ. ಹೆಣ್ಣನ್ನು ಗೌರವಿಸಬೇಕು. ಆಕೆಯನ್ನು ಪ್ರೋತ್ಸಾಹಿಸಬೇಕು. ಆಕೆಯನ್ನು ಎರಡನೇ ದರ್ಜೆಯ ನಾಗರಿಕಳೆಂದು ಭಾವಿಸಬಾರದು. ಶೈಕ್ಷಣಿಕ, ಆರ್ಥಿಕವಾಗಿ ಆಕೆ ಸದೃಢವಾಗಲು ಸಹಕಾರ ನೀಡಬೇಕೆಂದು ರಂಜನಿ ರಾಘವನ್ ಹೇಳಿದರು.