ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿ ಮಾರಕ ಆಯುಧಗಳೊಂದಿಗೆ ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಿದ್ದ ಯುವಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಗಿಗುಡ್ಡದ 7ನೇ ಕ್ರಾಸ್‌ನ ಮಹಮ್ಮದ್ ಸುಹೆಲ್ (26) ವಿರುದ್ಧ ಸುಮೋಟೊ ಕೇಸ್ ದಾಖಲಾಗಿದೆ. ಸೆ.23ರಂದು ರಾಗಿಗುಡ್ಡ ಸರ್ಕಲ್ ವ್ಯಾಪ್ತಿಯಲ್ಲಿ ಎಎಸ್‌ಐ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಯುವಕನೊಬ್ಬ ಮಾರಕ ಆಯುಧಗಳನ್ನು ಪ್ರದರ್ಶಿಸುತ್ತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು.
ಎಂಡಿ ಸುಹೆಲ್ ಎಂಬ ಇನ್‌ಸ್ಟಾಗ್ರಾಂ ಐಡಿಯಲ್ಲಿ ಆರೋಪಿಯು ಒಂದು ಕೈಯಲ್ಲಿ ಗನ್ ಮತ್ತೊಂದು ಕೈಯಲ್ಲಿ ಡ್ರ್ಯಾಗರ್ ಹಿಡಿದು ಬೆದರಿಕೆ ಹಾಕುವ ರೀತಿ 11 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಿದ್ದ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ರೀಲ್ಸ್ ಹಂಚಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.