ಭದ್ರಾವತಿ ಸುಣ್ಣದಹಳ್ಳಿಯಲ್ಲಿ ಜರುಗಿದ ಶ್ರಿ ವೀರಾಂಜನೇಯಸ್ವಾಮಿ ರಥೋತ್ಸವ.
ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವವು ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಮಧ್ಯಾಹ್ನ 12ಕ್ಕೆ ಸಿಂಗಾರಗೊಂಡಿದ್ದ ರಥದಲ್ಲಿ ವೀರಾಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ಶ್ರೀ ರಾಮ ಜಯರಾಮ...ಜಯಜಯ ರಾಮ ಎಂದು ಜೈಕಾರ ಹಾಕಿದರು. ರಥದ ಮೇಲೆ ಬಾಳೆ ಹಣ್ಣು, ಮೆಣಸು ಮತ್ತಿತರ ದವಸ ಧಾನ್ಯಗಳನ್ನು ಎಸೆದು ಹರಕೆ ತೀರಿಸಿದರು.
ಮಾರುತಿನಗರ, ಎರೆಹಳ್ಳಿ, ಮಾವಿನಕೆರೆ, ಬಾರಂದೂರು, ಕಾರೇಹಳ್ಳಿ ಸೇರಿದಂತೆ ನಗರದ ಸುತ್ತಮುತ್ತಲ ಗ್ರಾಮದ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಆವರಣದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಕಲ್ಲಂಗಡಿಹಣ್ಣು. ಅನಾನಸ್ ಸೇರಿ ಇನ್ನಿತರ ಹಣ್ಣುಗಳನ್ನು ಬಳಸಿ ಗರ್ಭಗುಡಿಯ ಸುತ್ತಲೂ ಮಾಡಿದ್ದ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ಸುಡು ಬಿಸಿಲಿನಲ್ಲಿಯೂ ಸಾವಿರಾರು ಭಕ್ತರು ಸೇರಿದ್ದರು. ರಥೋತ್ಸವದ ನಂತರ ಪ್ರಸಾದ ವಿತರಿಸಲಾಯಿತು.