ಸೊರಬದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶ್ರೀಕಾಂತ, ಎಸ್.ಜಿ.ರಾಮಚಂದ್ರ ಮತ್ತಿತರರು ಇದ್ದರು.
ಸೊರಬ: ಮನುಷ್ಯರ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಇದ್ದಾಗ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ದೈವಜ್ಞ ಬ್ರಾಹ್ಮಣ ಸಮಾಜದಿಂದ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆರ್ಶೀವಚನ ನೀಡಿದ ಅವರು, ನಮ್ಮ ಉನ್ನತಿ ಮತ್ತು ಅವನತಿ ನಾವು ಮಾಡುವ ಕೆಲಸವನ್ನು ಅವಲಂಬಿಸಿರುತ್ತದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನು ಹೆಚ್ಚು ಶುದ್ಧಿ ಮಾಡಿಕೊಳ್ಳಬೇಕು. ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಸುಶಿಕ್ಷಿತರಾದರೆ ಸಾಲದು. ಸದಾ ಉತ್ತಮ ಚಿಂತನೆಗಳನ್ನು ರೂಢಿಸಿಕೊಂಡು ಸಂಸ್ಕ್ಕಾರವಂತರಾಗಬೇಕು. ಶಿಕ್ಷಣದ ಜತೆ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ. ಎಲ್ಲರೂ ಒಗ್ಗೂಡಿ ಸಹಬಾಳ್ವೆಯಿಂದ ಸಂಘಟನಾತ್ಮಕವಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.
ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರನ್ನು ರಥದಲ್ಲಿ ಕಲಾಮೇಳಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಕಾಂತ, ಕಾರ್ಯದರ್ಶಿ ಎಸ್.ಜಿ.ರಾಮಚಂದ್ರ, ಪ್ರಸನ್ನಕುಮಾರ ದೊಡ್ಡಮನೆ, ಮಧುರಾಯ ಜಿ.ಶೇಟ್, ಟಿ.ಆರ್.ಸುರೇಶ್, ಅರುಣ್‌ಕುಮಾರ, ಸತ್ಯನಾರಾಯಣ, ಎಲ್.ಗಿರೀಶ್, ಬಂದಗಿ ಬಸವರಾಜ್ ಶೇಟ್, ರಾಜಕುಮಾರ್ ಇತರರಿದ್ದರು.