ಶಿಕಾರಿಪುರದಲ್ಲಿ ಆಯೋಜಿಸಿದ್ದ ಕುಮದ್ವತಿ ಉತ್ಸವದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸ್ಥಾಪಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು. ಬಿ.ವೈ.ರಾಘವೇಂದ್ರ, ತೇಜಸ್ವಿನಿ ರಾಘವೇಂದ್ರ, ಎಂ.ಬಿ.ಶಿವಕುಮಾರ್, ಇತರರಿದ್ದರು.
ಶಿಕಾರಿಪುರ: ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಅದರ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಓಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರಿಶ್ರಮವೇ ಜಯ ತಂದುಕೊಡುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ‘ಕುಮದ್ವತಿ ಉತ್ಸವ’ದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಡೆಯುವ ಇಂತಹ ಕಾರ್ಯಕ್ರಮಗಳು ಚೇತೋಹಾರಿ. ಪಠ್ಯದ ಜತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಅರಿಯಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಎಂದರು.
ವಿದ್ಯಾರ್ಥಿಗಳು ನಮ್ಮ ಹಾಗೂ ಸಂಸ್ಕೃತಿಯ ವಾರಸುದಾರರು. ಬಸವಾದಿ ಶರಣರ ಆಶಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮಾನವ ಹಾಗೂ ಭವ್ಯ ಭಾರತ ನಿರ್ಮಾಣ ಇಂದಿನ ಶಿಕ್ಷಣದ ಪ್ರಮುಖ ಆಶಯ. ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಎಂದಿಗೂ ದೊಡ್ಡ ಕನಸುಗಳನ್ನು ಹೊಂದಿರಬೇಕು. ನಮ್ಮ ಸಂಕಲ್ಪ ದೃಢವಾಗಿರಬೇಕು. ಇದರ ಬಲದಿಂದ ಯಶಸ್ಸು ಕಾಣಲು ಸಾಧ್ಯ. ಹಾರುವ ಹಕ್ಕಿಗೆ ರೆಕ್ಕೆ ಹೇಗೆ ಮುಖ್ಯವೋ ಹಾಗೆಯೇ ಮೌಲ್ಯ ಮತ್ತು ಶಿಕ್ಷಣ ಅಷ್ಟೇ ಮುಖ್ಯ. ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗಷ್ಟೇ ಸೀಮಿತಗೊಳಿಸದೆ, ಕೌಶಲ ಬೆಳೆಸುವತ್ತ ಗಮನಹರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಸ್ಥೆ ಪರವಾಗಿ ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ್, ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ, ಉದ್ಯಮಿ ಬಿ.ಆರ್.ಸುಭಾಷ್, ಶ್ರವಣಾ, ಬಿ.ಆರ್.ಭಗತ್, ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ಗುರುಮೂರ್ತಿ, ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ಇತರರಿದ್ದರು.