ಮಾಜಿ ಸಚಿವ ಹರತಾಳು ಹಾಲಪ್ಪ  
ಶಿವಮೊಗ್ಗ

ಸಾಗರ ಜಿಲ್ಲೆ ರಚನೆಗೆ ಪ್ರಸ್ತಾವನೆ ಸಲ್ಲಿಸಿ

ಸಾಗರ: ಲಾಗಾಯ್ತಿನಿಂದ ಸಾಗರ ಜಿಲ್ಲೆ ಆಗಬೇಕೆಂಬ ಹಕ್ಕೊತ್ತಾಯವಿದೆ. ಅದಕ್ಕೆ ಪೂರಕವಾಗಿ ಜಿಲ್ಲಾ ಹೋರಾಟ ಸಮಿತಿ ಹೋರಾಟ ಮಾಡುತ್ತ ಬರುತ್ತಿದೆ. ಡಿ.31ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸದಿದ್ದರೆ ಮುಂದಿನ 18 ತಿಂಗಳು ಸಾಗರ ಜಿಲ್ಲೆ ಮಾಡಬೇಕೆಂಬ ಪ್ರಸ್ತಾವನೆ ನನೆಗುದಿಗೆ ಬೀಳುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಡಿ.31ರೊಳಗೆ ಪ್ರಸ್ತಾವನೆ ಸಲ್ಲಿಸಲು ರಾಜ್ಯಗಳಿಗೆ ಪತ್ರ ಬರೆದಿದೆ. ಒಂದೊಮ್ಮೆ ಜಿಲ್ಲೆ ಪ್ರಸ್ತಾಪ ರಾಜ್ಯಗಳಿಂದ ಕಳಿಸದಿದ್ದರೆ ಜನಗಣತಿ, ಜಾತಿಗಣತಿ ಮುಗಿಯುವವರೆಗೂ ಹೊಸ ಜಿಲ್ಲೆ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದರು.
ಪ್ರತ್ಯೇಕ ಜಿಲ್ಲೆಯಾಗುವ ಸಾಧ್ಯತೆ ಇರುವುದು ಸಾಗರ ಉಪವಿಭಾಗ ಕೇಂದ್ರಕ್ಕೆ ಮಾತ್ರ. ಸಾಗರ, ಹೊಸನಗರ, ಸೊರಬ ಸೇರಿ ಮಲೆನಾಡು ಜಿಲ್ಲೆ ಮಾಡಲು ಅಗತ್ಯ ವಾತಾವರಣ ಇದೆ. ಜಿಲ್ಲೆ ಆಗುವುದರಿಂದ ಅಗತ್ಯ ಸೌಲಭ್ಯ ಸಾಗರಕ್ಕೆ ಸಿಗುತ್ತದೆ. ಜಿಲ್ಲಾಸ್ಪತ್ರೆ, ಜಿಲ್ಲಾ ಮಟ್ಟದ ಕಚೇರಿಗಳು, ಸಾರಿಗೆ ಸಂಪರ್ಕ ಎಲ್ಲವೂ ಅಭಿವೃದ್ಧಿ ಹೊಂದುತ್ತದೆ. ಈ ಎಲ್ಲವನ್ನೂ ಮನಗಂಡು ಜಿಲ್ಲೆಯಾಗುವುದರ ಬಗ್ಗೆ ಸರ್ಕಾರದ ಮೇಲೆ ಅಗತ್ಯ ಒತ್ತಡ ತರುವ ಕೆಲಸವನ್ನು ಹೋರಾಟ ಸಮಿತಿ ಮಾಡಿದೆ. ಈ ಹೋರಾಟಕ್ಕೆ ನಾನು ಮತ್ತು ನಮ್ಮ ಪಕ್ಷ ಎಂದಿಗೂ ಬೆಂಬಲಿಸಿಕೊಂಡು ಬಂದಿದೆ ಎಂದರು.