ನೂತನ ನ್ಯಾಯಾಧೀಶರಾಗಿ ಆಯ್ಕೆಯಾದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅನನ್ಯಾ ಶಾಸ್ತ್ರಿ, ಕೆ.ಎಸ್.ರಕ್ಷಿತಾ, ಸಂಮ್ಯಕ್ತಾ ಮುಪ್ಪಾನೆ ಅವರನ್ನು ಸನ್ಮಾನಿಸಲಾಯಿತು. ಡಾ. ಅನಲಾ, ಜಿ.ಎಸ್.ನಾರಾಯಣ ರಾವ್, ಎಸ್.ಎನ್.ನಾಗರಾಜ, ಎಂ.ಎಸ್.ಅನಂತದತ್ತಾ ಇತರರಿದ್ದರು. 
ಶಿವಮೊಗ್ಗ

ಕಾನೂನು ವ್ಯಾಖ್ಯಾನಗಳ ಅಧ್ಯಯನ ಅವಶ್ಯಕ | Law College

ಪ್ರಮುಖ ಮುಖ್ಯಾಂಶಗಳು

  • ಸೋಲಿನಿಂದಲೂ ಪಾಠ ಕಲಿಯುವ ಮನಸ್ಥಿತಿ ಇರಲಿ
  • ನ್ಯಾಯಾಧೀಶೆ ಅನನ್ಯಾ ಶಾಸ್ತ್ರಿ ಅಭಿಮತ
  • ಕಾನೂನು ಮಹಾವಿದ್ಯಾಲಯದಲ್ಲಿ ಸನ್ಮಾನ
ಶಿವಮೊಗ್ಗ: ನ್ಯಾಯಾಂಗ ವ್ಯವಸ್ಥೆ(Judicial System)ಯಲ್ಲಿ ಅತ್ಯುನ್ನತ ಸಾಧನೆಗೆ ಶಾಸನಗಳಲ್ಲಿ ಅಡಕವಾಗಿರುವ ಕಾನೂನು ವ್ಯಾಖ್ಯಾನಗಳ ಆಳವಾದ ಅಧ್ಯಯನ ಅತ್ಯವಶ್ಯ ಎಂದು ನೂತನ ನ್ಯಾಯಾಧೀಶೆ ಅನನ್ಯಾ ಶಾಸ್ತ್ರಿ ಹೇಳಿದರು.
ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ(Law College)ದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೋಲಿನಿಂದ ಹೊಸ ಅನುಭವಗಳನ್ನು ಕಲಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಂತರ ಯಶಸ್ಸಿನ ಸಿಹಿ ಮತ್ತಷ್ಟು ದುಪ್ಪಟ್ಟಾಗುತ್ತದೆ ಎಂದರು.
ನ್ಯಾಯಾಧೀಶೆ ಕೆ.ಎಸ್.ರಕ್ಷಿತಾ ಮಾತನಾಡಿ, ಶೈಕ್ಷಣಿಕ ಚಟುವಟಿಕೆ(Educational activity)ಗಳ ಜತೆಗೆ ಜೀವನ ಮೌಲ್ಯಗಳನ್ನೂ ಉಪನ್ಯಾಸಕ ವೃಂದ ಕಲಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶದಿಂದ ಬಂದ ನಮಗೆ ಯಾವುದೇ ನ್ಯಾಯಾಂಗ ಹಿನ್ನೆಲೆ ಇರಲಿಲ್ಲ. ದೊಡ್ಡ ಕನಸುಗಳನ್ನು ಕಾಣಲು ಪ್ರಯತ್ನಿಸಬೇಕು. ಸಣ್ಣ ಅವಕಾಶವನ್ನೂ ದೊಡ್ಡ ಸಾಧನೆಗೆ ದಾರಿಯನ್ನಾಗಿ ಮಾಡಿಕೊಳ್ಳಬೇಕು. ಯಶಸ್ಸಿಗೆ ಜ್ಞಾನದ ಜತೆಗೆ ಕೌಶಲ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಅಗತ್ಯ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ(ಎನ್‌ಇಎಸ್) ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಅತ್ಯಂತ ಹೊಣೆಗಾರಿಕೆ ಇರುವ ಕ್ಷೇತ್ರ. ನ್ಯಾಯ ನೀಡುವ ವ್ಯಕ್ತಿಯು ವೈಜ್ಞಾನಿಕ ಮನೋಭಾವ, ವೃತ್ತಿಪರ ನಿಷ್ಠೆ, ಸಹಾನುಭೂತಿ ಮತ್ತು ಮಾನವೀಯ ಮೌಲ್ಯ(Human value)ಗಳನ್ನು ಹೊಂದಿರಬೇಕು. ನ್ಯಾಯಾಧೀಶರ ತೀರ್ಪುಗಳು ಸಮಾಜದ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ, ನೂತನ ನ್ಯಾಯಾಧೀಶೆ ಸಂಮ್ಯಕ್ತಾ ಮುಪ್ಪಾನೆ, ಎನ್‌ಇಎಸ್ ನಿರ್ದೇಶಕ ಎಂ.ಎಸ್.ಅನಂತದತ್ತಾ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಐಕ್ಯೂಎಸಿ ಸಂಯೋಜಕ ಡಾ. ಕಾಂತರಾಜ್ ಉಪಸ್ಥಿತರಿದ್ದರು. 
"

ಪ್ರಜಾಪ್ರಭುತ್ವದ ಉಳಿವು ಮತ್ತು ರಕ್ಷಣೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅವಲಂಬಿತವಾಗಿದೆ. ಆಳುವವರ ಅಜ್ಞಾನದಿಂದ ನ್ಯಾಯಾಂಗದ ಮೇಲೆ ಹೆಚ್ಚಿನ ಹೊರೆ ಉಂಟಾಗುತ್ತಿದೆ. ನಾವು ಅಲಂಕರಿಸುವ ಉನ್ನತ ಹುದ್ದೆಗಳು ನಮ್ಮ ಸೌಜನ್ಯತೆಯನ್ನು ಕಳೆದುಕೊಳ್ಳುವಂತೆ ಮಾಡಬಾರದು.

— ಜಿ.ಎಸ್.ನಾರಾಯಣ ರಾವ್, ಎನ್‌ಇಎಸ್ ಅಧ್ಯಕ್ಷ